

ಚಳ್ಳಕೆರೆ: ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ಸಾಗಿದೆ ಎಂದು ದಿನನಿತ್ಯ ಸಾರ್ವಜನಿಕರು ನೂರಾರು ದೂರು ನೀಡುತ್ತಿದ್ದಾರೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸ್ಯಾಂಡ್ ಮಾಫಿಯಾವನ್ನು ನಿಯಂತ್ರಣಕ್ಕೆ ತರಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ವರ್ಷಗಟ್ಟಲೆ ಅಲೆದಾಡಿದರೂ ಹಕ್ಕುಪತ್ರ ಸಿಗುತ್ತಿಲ್ಲ. ವಸತಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಿಲ್ಲ. ಬಾಡಿಗೆ ಕಟ್ಟಲಾಗದೆ ಕಷ್ಟದ ಪರಿಸ್ಥಿತಿಯಲ್ಲಿ ಜೀವನ ದೂಡುತ್ತಿದ್ದೇವೆ.
ಮಳೆಯ ಹೊಡೆತಕ್ಕೆ ಸಿಲುಕಿ ಸೂರು ಶಿಥಿಲಾವಸ್ಥೆಯಲ್ಲಿದೆ. ಶಾಲಾ ಕೊಠಡಿ ಹಾಳಾಗಿವೆ. ಅಂಗನವಾಡಿ ವ್ಯವಸ್ಥೆ ಇಲ್ಲ. ಮದ್ಯ ಮಾರಾಟ ಹಾವಳಿ ಹೆಚ್ಚಾಗಿದೆ.
ಸಿಸಿ ಕಣ್ಗಾವಲು ಅಳವಡಿಸಿ, ಹೀಗೆ ನೂರಾರು ಸಮಸ್ಯೆಗಳು ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ಆಯೋಜಿಸಿದ್ದ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯ ಜನಸಂಪರ್ಕ ಸಭೆಯಲ್ಲಿ ಪ್ರತಿಧ್ವನಿಸಿದವು.
ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಮಾತನಾಡಿ, ಗ್ರಾಮಾಂತರ ಭಾಗದ ವಸತಿ ಸಮಸ್ಯೆಗಳ ನಿವಾರಣೆಗೆ ಈಗಾಗಲೇ ಗೋಮಾಳ ಭೂಮಿಯಲ್ಲಿ ಸೈಟುಗಳ ಹಂಚಿಕೆಗೆ ಸ್ಥಳೀಯ ಪಂಚಾಯಿತಿಗಳಿಗೆ ಸೂಚಿಸಲಾಗಿದೆ.
ಮೀರಸಾಬಿಹಳ್ಳಿ ಗ್ರಾಮಸ್ಥರಿಗೆ ಗೋಮಾಳ ಭೂಮಿಯಲ್ಲಿ 6 ಎಕರೆ ವಸತಿ ಸೌಲಭ್ಯಕ್ಕೆ ನಿಗದಿ ಮಾಡಲಾಗಿದೆ. ಸೂರು ಇಲ್ಲದವರಿಗೆ 120 ನಿವೇಶನಗಳ ವ್ಯವಸ್ಥೆಗೆ ತಾಲೂಕು ಆಡಳಿತಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳ ಮಾಹಿತಿ ಆಧರಿಸಿ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ ನೀಡುವಂತೆ ಅಕ್ಷರ ದಾಸೋಹ ನಿರ್ದೇಶಕ ತಿಪ್ಪೇಸ್ವಾಮಿ ಅವರಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆ ಮತ್ತು ಶುದ್ಧ ನೀರಿನ ಘಟಕಗಳ ರಿಪೇರಿ ಕಾರ್ಯ ಯಾಕೆ ಕೈಗೊಂಡಿಲ್ಲ ಎಂದು ಅಧಿಕಾರಿ ಎನ್. ಕಾವ್ಯ ಅವರನ್ನು ಶಾಸಕರು ಪ್ರಶ್ನಿಸಿದರು. ರಿಪೇರಿ ಕಾರ್ಯಕ್ಕೆ ತಗುಲುವ ವೆಚ್ಚಕ್ಕೆ ಮಂಜೂರಾತಿ ಕೊಡುತ್ತಿಲ್ಲ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಅಧಿಕಾರಿಗೆ ಸೂಚಿಸುತ್ತೇನೆ. ಕೂಡಲೇ ಅಗತ್ಯ ಇರುವ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಫಲಶ್ರುತಿ: ಕುಡುಕರ ಹಾವಳಿಗೆ ನಲುಗಿದ ಶಾಲಾ ಆವರಣಗಳು ಎಂದು ವಿಜಯವಾಣಿಯಲ್ಲಿ ವರದಿ ಆಗಿದ್ದ ವಿಷಯ ಪ್ರಸ್ತಾಪಿಸಿ, ನಗರದ ಮಧ್ಯ ಭಾಗದ
ಶಾಲೆಗಳಲ್ಲಿ ಇಂತಹ ಪರಿಸ್ಥಿತಿ ಇದೆ ಎಂದರೆ ಇದಕ್ಕೆ ಯಾರು ಹೊಣೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಎಫ್. ದೇಸಾಯಿ ಅವರನ್ನು ಖಾರವಾಗಿ ಪ್ರಶ್ನಿಸಿದರು.
ಶಾಲಾ ಆವರಣದಲ್ಲಿ ಕುಡುಕರ ಹಾವಳಿ ತಪ್ಪಿಸಲು ಜುಲೈ ತಿಂಗಳಲ್ಲಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಭೆಯಲ್ಲಿದ್ದ ಮುಖ್ಯಶಿಕ್ಷಕ
ಮಂಜುನಾಥ ರೆಡ್ಡಿ ಹೇಳಿದ್ದರಿಂದ ಗರಂ ಆದ ಶಾಸಕರು, ಕೂಡಲೇ ರಾತ್ರಿ ಪಾಳಯದಲ್ಲಿ ಶಾಲಾ ಆವರಣಗಳ ಸುರಕ್ಷತೆಗೆ ಪೊಲೀಸ್ ಭದ್ರತೆ ನಿಯೋಜಿಸಲು ಸೂಚಿಸಿದರು.
ಮದ್ಯ ಮಾರಾಟ ನಿಲ್ಲಲಿ: ಮಹಿಳೆಯರ ಬೇಡಿಕೆಯಂತೆ ಗ್ರಾಮಾಂತರ ಭಾಗಗಳಲ್ಲಿ ಮದ್ಯದ ಅಂಗಡಿ ಸ್ಥಾಪಿಸಲು ಅನುಮತಿ ನೀಡಿಲ್ಲ. ಆದರೂ, ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟದ ಹಾವಳಿಯಿಂದ ಜನರು ಬೇಸತ್ತಿದ್ದಾರೆ.
ಗ್ರಾಮಗಳಿಗೆ ಪೊಲೀಸ್ ಭದ್ರತೆ ನಿಯೋಜನೆ ಮಾಡಿ ಕ್ರಮ ಜರುಗಿಸಬೇಕು. ರಾಜಕೀಯವಾಗಿ ಏನೇ ಒತ್ತಡ ಬಂದರೂ ಮಣಿಯಬಾರದು. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಖಡಕ್ಕಾಗಿ ಹೇಳಿದರು.