ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು

26mnv01
ಮಾನ್ವಿ ಪುರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ವಿಪಕ್ಷ ನಾಯಕ ರಾಜಾ ಮಹೇಂದ್ರ ನಾಯಕ ಮಾತನಾಡಿದರು. ಸದಸ್ಯರಾದ ಶಾಬೀರ್‌ಪಾಷಾ, ಶರಣಗೌಡ, ರೇವಣಸಿದ್ದಯ್ಯಸ್ವಾಮಿ, ಶರಣಪ್ಪ ಮೇದಾ ಇತರರಿದ್ದರು.
Published on

ಮಾನ್ವಿ: ಪುರಸಭೆ ವ್ಯಾಪ್ತಿಗೆ ಒಳಪಡುವ ವಿದ್ಯುತ್, ಅರಣ್ಯ, ಆರೋಗ್ಯ ಇಲಾಖೆ, ಕುಡಿವ ನೀರಿನ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ವಿಪಕ್ಷ ನಾಯಕ ರಾಜಾ ಮಹೇಂದ್ರ ನಾಯಕ ಆರೋಪಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಅಮೃತ-2 ಯೋಜನೆಯಡಿ 27 ವಾರ್ಡ್‌ಗಳಿಗೆ ನೀರು ಪೂರೈಕೆ ಹಾಗೂ ಸಂಗ್ರಹಕ್ಕೆ ಟ್ಯಾಂಕ್‌ಗಳ ನಿರ್ಮಾಣಕ್ಕೆ ಸಿಸಿ ರಸ್ತೆಗಳನ್ನು ಅಗೆದು ಪೈಪ್‌ಲೈನ್ ಹಾಕಲಾಗುತ್ತಿದೆ.

ನಂತರ ರಸ್ತೆ ಸರಿಪಡಿಸದೆ ಬಿಡುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಾರ್ವಜನಿಕರಿಗೆ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರದಿಂದ ಪುರಸಭೆಗೆ 4 ಕೋಟಿ ರೂ. ಅನುದಾನ ಬಂದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಪುರಸಭೆ ಸದಸ್ಯರು ಅಗತ್ಯ ಸೌಲಭ್ಯಗಳ ಬೇಡಿಕೆ ಇಟ್ಟಲ್ಲಿ ಅಧಿಕಾರಿಗಳು ಪರಿಶೀಲಿಸಿ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು ಎಂದು ಕೋರಿದರು.

ಪುರಸಭೆ ಸಿಒ ಪರಶುರಾಮ ದೇವಮಾನೆ ಮಾತನಾಡಿ, ಕಾಮಗಾರಿಗೆ ಟೆಂಡರ್ ಕರೆಯಲಾಗುವುದು. ಸದಸ್ಯರು ಮತ್ತು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಶೇಕ್ ಫರೀದ್ ಉಮ್ರಿ ಮಾತನಾಡಿ, ಕಳಪೆ ಕಾಮಗಾರಿ ನಡೆಸುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆಗೆ ಸೇರಿಸಿ ಗುಣಮಟ್ಟದ ಕಾಮಗಾರಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಮ್ಜದ್ ಖಾನ್ ಮಾತನಾಡಿ, ಪಟ್ಟಣದಲ್ಲಿರುವ ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

ದೇವನ ತೋಟ ಪ್ರದೇಶದ ವ್ಯಾಪ್ತಿ 500ಕ್ಕೂ ಹೆಚ್ಚು ಮನೆಗಳಿಗೆ ಕಟ್ಟಡ ಪರವಾನಗಿ ನೀಡಲು ಕ್ರಮ ವಹಿಸುವುದರಿಂದ ಪುರಸಭೆ ಆದಾಯ ಹೆಚ್ಚಲಿದೆ ಎಂದರು.

ಪುರಸಭೆ ಪ್ರಭಾರ ಅಧ್ಯಕ್ಷೆ ಮೀನಾಕ್ಷಿ ರಾಮಕೃಷ್ಣ, ಸದಸ್ಯರಾದ ಲಕ್ಷ್ಮೀದೇವಿ ನಾಯಕ, ಶಾಬೀರ್‌ಪಾಷಾ, ಶರಣಗೌಡ, ರೇವಣಸಿದ್ದಯ್ಯಸ್ವಾಮಿ, ಶರಣಪ್ಪ ಮೇದಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net