

ಮುನಿರಾಜ.ಆರ್ ವೇಮಗಲ್ : ಕೋಲಾರ ತಾಲೂಕಿನ ವೇಮಗಲ್ ಪಟ್ಟಣದ ಸುಣ್ಣಕಲ್ಲುಗೂಡು ಗ್ರಾಮದ ರಸ್ತೆಯಲ್ಲಿ ಸರಿಯಾದ ಬೀದಿ ದೀಪ, ಚರಂಡಿ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾವಾಗಿದೆ. ಅಷ್ಟೇ ಅಲ್ಲದೇ ರಸ್ತೆ ಪೂರ್ತಿ ಗಿಡ&ಗಂಟಿಗಳು ಬೆಳೆದು ಪಾದಚಾರಿಗಳಿಗೆ ಓಡಾಡಲು ಕಿರಿಕಿರಿ ಉಂಟಾಗಿದೆ.
ಚನ್ನಪ್ಪನಹಳ್ಳಿ ರಸ್ತೆಯಿಂದ ಸುಣ್ಣಕಲ್ಲುಗೂಡು ಗ್ರಾಮ ನಡುವೆ ವಿದ್ಯುತ್ ಕಂಬಗಳು ಇಲ್ಲದಿರುವುದು ವಿಪರ್ಯಾಸವಾಗಿದೆ. ಸಂಜೆ 6 ಗಂಟೆಯಾದರೆ ವೃದ್ಧರು, ಮಹಿಳೆಯರು, ಮಕ್ಕಳು ರಸ್ತೆ ಕಾಣದೆ ಜೀವ ಕೈಯಲ್ಲಿ ಇಟ್ಟುಕೊಂಡು ನಡೆದಾಡುವ ಪರಿಸ್ಥಿತಿ ಎದುರಾಗಿದೆ. ರಸ್ತೆಯೂದ್ದಕ್ಕೂ ಗಿಡ&ಗಂಟಿ ಬೆಳೆದು ಕಾಡು ಕೊಂಪೆಯಾಗಿ ಹಾವು, ಚೇಳು ಹಾಗೂ ಇನ್ನಿತರೆ ಕ್ರಿಮಿ ಕೀಟಗಳು ಪೊದೆಗಳಲ್ಲಿ ಅವಿತಿದ್ದು, ರಾತ್ರಿ ನಡೆದು ಬರಲು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ.
ಗ್ರಾಮಸ್ಥರು ಈ ಹಿಂದೆ ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದು ಮನವಿ ಸಲ್ಲಿಸಲಾಗಿದೆ. ಆದರೂ, ಇಲ್ಲಿನ ಅಧಿಕಾರಿಗಳು ತಮ್ಮಗೆ ಸಂಬಂಧವಿಲ್ಲದ ಹಾಗೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಕಂಬಗಳಲ್ಲಿದೇ, ದ್ವಿಚಕ್ರ ವಾಹನಗಳು ಹಾಗೂ ಇತರೆ ವಾಹನಗಳು ಬರುವುದು ಕಾಣದೆ ಅಪಘಾತಗಳು ಆಗುತ್ತವೆ ಎಂಬ ಭಯ ಜನರಲ್ಲಿ ಕಾಡುತ್ತಿದೆ. ಹಾಗಾಗಿ ಆದಷ್ಟು ಬೇಗ ಈ ರಸ್ತೆಯ ದುರಸ್ತಿ ಕಾಮಗಾರಿ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಚನ್ನಪ್ಪನಹಳ್ಳಿ ರಸ್ತೆಯಿಂದ ನಮ್ಮ ಗ್ರಾಮದವರೆಗೂ ಬೀದಿ ದೀಪಗಳಿಲ್ಲ. ಚರಂಡಿ ವ್ಯವಸ್ಥೆ ಇಲ್ಲ, ಏಕೆ ನಾವು ಜನಗಳಲ್ಲವೇ ಎಷ್ಟೊಂದು ಅಸಡ್ಡೆ ಯಾಕೆ?.ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು. - ಓಂಶಕ್ತಿ ನಾಗರಾಜ್, ಗ್ರಾಮಸ್ಥ ಗ್ರಾಮ ಪಂಚಾಯಿತಿ ಇದ್ದಗಿನಿಂದಲೂ ಹಾಗೂ ಪಟ್ಟಣ ಪಂಚಾಯಿತಿಗೆ ಬಂದ ಈ ಹಿಂದೆ ಇದ್ದ ಅಧಿಕಾರಿಗಳ ಗಮನಕ್ಕೂ ತಂದು ಮನವಿ ಸಲ್ಲಿಸಿದರೂ, ಯಾವುದೇ ಅನುಕೂಲವಾಗಿಲ್ಲ. ಈಗಿರುವ ಅಧಿಕಾರಿಗಲಾದರೂ ದಯವಿಟ್ಟು ಗಮನ ಹರಿಸಿ ಸಮಸ್ಯೆ ಬಗೆಹರಿಸಿ. - ವಿನೋದ್, ಗ್ರಾಮಸ್ಥ ಗ್ರಾಮ ಪಂಚಾಯಿತಿ ಇದ್ದಾಗ ಸಾರ್ವಜನಿಕರು ಸಾಕಷ್ಟು ದೂರು ನೀಡಿರಬಹುದು ಹಾಗೂ ಈ ಹಿಂದೆ ಅಧಿಕಾರಿಗಳಿಗೂ ಪತ್ರ ನೀಡಿರಬಹುದು, ಆದರೆ ನಾನು ಬಂದಾಗಿಂದ ಯಾವುದೇ ದೂರು ನೀಡಿಲ್ಲ. ಈದೀಗ ನಮ್ಮ ಗಮನಕ್ಕೆ ಬಂದಿದೆ ಸಾಧ್ಯವಾದಷ್ಟು ಸಮಸ್ಯೆ ಬಗೆಹರಿಸುತ್ತೇವೆ. - ಎಸ್. ಎಂ. ವೆಂಕಟೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ವೇಮಗಲ್