

ಚಿಕ್ಕಮಗಳೂರು: ಸಾರ್ವಜನಿಕರು ನಿಗದಿತ ಸಮಯಕ್ಕೆ ತೆರಿಗೆ ಪಾವತಿಸಿದರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.
ನಗರಸಭೆ ಕಾರ್ಯಾಲಯದಲ್ಲಿ ಶುಕ್ರವಾರ ತೆರಿಗೆ ವಸೂಲಾತಿಗೆ ವೈರ್ ಲೆಸ್ ಥರ್ಮಲ್ ಪ್ರಿಂಟರ್ ಮತ್ತು ಫೋನ್ ಅನ್ನು ನಗರಸಭೆ ಸಿಬ್ಬಂದಿಗೆ ವಿತರಿಸಿ ಮಾತನಾಡಿದ ಅವರು, ಯಾವುದೇ ಒಂದು ವರ್ಗದಲ್ಲಿ ಆದಾಯದ ಕ್ರೋಢೀಕರಣ ಸಮರ್ಪಕವಾಗಿದ್ದರೆ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮತ್ತು ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಾಧ್ಯ ಎಂದರು.
ಸಾರ್ವಜನಿಕರು ನೀರು, ವಿದ್ಯುತ್, ಆಸ್ತಿ ತೆರಿಗೆ ಸೇರಿದಂತೆ ವಿವಿಧ ರೀತಿಯ ತೆರಿಗೆಗಳನ್ನು ನಿಗದಿತ ಸಮಯಕ್ಕೆ ಪಾವತಿಸಬೇಕು. ಆಧುನಿಕ ಯುಗದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಯಾವುದೇ ಕಾರ್ಯವನ್ನು ಶೀಘ್ರವಾಗಿ ಮಾಡಲು ಸಾಧ್ಯ. ವೈರ್ ಲೆಸ್ ಥರ್ಮಲ್ ಪ್ರಿಂಟರ್ ಮತ್ತು ಫೋನ್ ಆಪ್‌ನಿಂದ ಸಾರ್ವಜನಿಕರು ಪಾರದರ್ಶಕವಾಗಿ ಫೋನ್ ಪೇ, ಗೂಗಲ್ ಪೇ ಮತ್ತು ಯಾವುದೇ ರೀತಿಯ ಆನ್ ಲೈನ್ ಪೇಮೆಂಟ್ ಆಪ್ ಮೂಲಕ ತೆರಿಗೆ ಪಾವತಿ ಮಾಡಿ ಸ್ಥಳದಲ್ಲಿಯೇ ರಸೀದಿ ಪಡೆದುಕೊಳ್ಳಬಹುದಾಗಿದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಇದರಿಂದಾಗಿ ಸಾರ್ವಜನಿಕರು ಕಚೇರಿಗೆ ಬರುವ ಅವಶ್ಯಕತೆ ಇರುವುದಿಲ್ಲ. ಜೊತೆಗೆ ಸಮಯ ಉಳಿತಾಯವಾಗುತ್ತದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ನಗರಸಭೆ ಆಯುಕ್ತ ಬಿ. ಬಸವರಾಜ್ ಮಾತನಾಡಿ ನಗರಸಭೆಯಲ್ಲಿ ಒಟ್ಟು ೩೫,೫೩೫ ಆಸ್ತಿಗಳಿದ್ದು, ಈ ಪೈಕಿ ೨೩,೩೪೮ ಕಟ್ಟಡಗಳು, ೪೫೩೬ ವಾಣಿಜ್ಯ ಕಟ್ಟಡಗಳು, ೭೫ ಕೈಗಾರಿಕಾ ಕಟ್ಟಡಗಳು ಮತ್ತು ೭,೫೭೬ ಖಾಲಿ ನಿವೇಶನಗಳಿವೆ. ಆಸ್ತಿ ತೆರಿಗೆ ಒಟ್ಟು ಬೇಡಿಕೆ ೧೫.೩೫ ಕೋಟಿ ಇದ್ದು ಇದರಲ್ಲಿ ೮.೮೬ ಕೋಟಿ ವಸೂಲಿಯಾಗಿದೆ. ನೀರಿನ ಕಂದಾಯ ಒಟ್ಟು ಬೇಡಿಕೆ ೮.೮೮ ಕೋಟಿ ಇದ್ದು, ಒಟ್ಟು ೧೮,೫೬೭ ವಸತಿ, ೪೫೬ ವಾಣಿಜ್ಯ, ೭೫ ಕೈಗಾರಿಕಾ ಸಂಪರ್ಕಗಳಿವೆ ಇವುಗಳಲ್ಲಿ ೧.೧೯ ಕೋಟಿ ಕಂದಾಯ ವಸೂಲಿಯಾಗಿದ್ದು, ಬಾಕಿ ವಸೂಲಾತಿಗೆ ಮನೆ ಮನೆಗೆ ತೆರಳಿ ತಿಳಿವಳಿಕೆ ನೀಡಲಾಗುತ್ತಿದೆ ಎಂದರು.
ಮಳಿಗೆ ಬಾಡಿಗೆ ಬೇಡಿಕೆ ೧.೪೭ ಕೋಟಿ ಇದ್ದು ೫೫.೬೩ ಲಕ್ಷ ವಸೂಲಿಯಾಗಿದೆ. ಉದ್ದಿಮೆ ಪರವಾನಗಿ ಒಟ್ಟು ಬೇಡಿಕೆ ೮೧.೪ ಲಕ್ಷಗಳಿದ್ದು, ೩೧ ಲಕ್ಷ ವಸೂಲಿಯಾಗಿದೆ. ಬಾಕಿ ವಸೂಲಾತಿಗೆ ಸಂಬAಧಪಟ್ಟವರಿಗೆ ನೋಟಿಸ್ ನೀಡಿ ಬಾಡಿಗೆ ಕಟ್ಟದೇ ಇರುವ ಮಳಿಗೆಗಳಿಗೆ ಬಾಗಿಲು ಹಾಕಿಸುವಂತಹ ಕ್ರಮ ಕೈಗೊಳ್ಳಲಾಗಿದೆ. ವೈರ್ ಲೆಸ್ ಥರ್ಮಲ್ ಪ್ರಿಂಟರ್ ಮತ್ತು ಫೋನ್ ಆಪ್ ನ ಸಹಾಯ ಪಡೆದು ಕಡ್ಡಾಯವಾಗಿ ತೆರಿಗೆ ಪಾವತಿಸಿ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.