ಸಮಾಜ ಸೇವೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯ

lions
Published on

ಮಡಿಕೇರಿ: ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಸಂಘ ಸಂಸ್ಥೆಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಸಮಾಜ ಸೇವೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಬಹಳ ಮುಖ್ಯ ಎಂದು ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ತಿಳಿಸಿದರು.

ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಅನುದಾನ ಮತ್ತು ಲಯನ್ಸ್ ಜಿಲ್ಲೆ ಇದರ ಸಹಯೋಗದೊಂದಿಗೆ ಮಡಿಕೇರಿ ಲಯನ್ಸ್ ಸಂಸ್ಥೆ ಸಮಾಜಮುಖಿ ಸೇವಾ ಕಾರ್ಯಕ್ರಮದ ಭಾಗವಾಗಿ ನಗರದ ಲಯನ್ಸ್ ಸಭಾಂಗಣದಲ್ಲಿ ನಡೆದ ಬಡವರಿಗೆ ದಿನಸಿ ಕಿಟ್ ಮತ್ತು ಕಂಬಳಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೆಲವು ವರ್ಷಗಳ ಹಿಂದೆ ಕೊಡಗಿನಲ್ಲಿ ಅತಿವೃಷ್ಟಿಯಿಂದ ಅನಾಹುತಗಳು ಸಂಭವಿಸಿದಾಗ ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ನೀಡಿದ ಸೇವೆ ಶ್ಲಾಘನೀಯ. ಸಮಾಜದಲ್ಲಿ ಯಾವುದೇ ರೀತಿಯ ಸಮಸ್ಯೆ ಮತ್ತು ಸಂಕಷ್ಟ ಎದುರಾದಾಗ ಸರಕಾರದೊಂದಿಗೆ ಸೇವಾಸಂಸ್ಥೆಗಳು ಕೈಜೋಡಿಸಿದಾಗ ಮಾತ್ರ ಪರಿಹಾರೋಪಾಯಗಳು ಯಶಸ್ವಿಯಾಗಲು ಸಾಧ್ಯ ಎಂದರು.

ಲಯನ್ಸ್ ಪ್ರಾಂತೀಯ ಅಧ್ಯಕ್ಷ ಲಯನ್ ಡಾ.ಪಂಚಮ್ ತಿಮ್ಮಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಮೂಲಕ ನಡೆಯುತ್ತಿರುವ ಸೇವಾ ಚಟುವಟಿಕೆಗಳ ಕುರಿತು ವಿವರಿಸಿದರು. ಬಡಜನರಿಗೆ ನೆರವಾಗುವ ಉದ್ದೇಶದಿಂದ ಅನುಷ್ಠಾನಗೊಳಿಸುತ್ತಿರುವ ಈ ರೀತಿಯ ಯೋಜನೆಗಳು ಸಮಾಜದಲ್ಲಿ ಉತ್ತಮ ಬದಲಾವಣೆಗೆ ಕಾರಣವಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ರಾಯಬಾರಿ ಲಯನ್ ಬಿ.ವಿ.ಮೋಹನ್ ದಾಸ್, ಪ್ರಾಂತೀಯ ರಾಯಭಾರಿ ಲಯನ್ ನವೀನ್ ಅಂಬೆಕಲ್, ವಲಯ್ಯಧ್ಯಕ್ಷ ಲಯನ್ ನಟರಾಜು ಕೆಸ್ತೂರ್, ಕೋಶಾಧಿಕಾರಿ ಲಯನ್ ಕೆ.ಕೆ.ದಾಮೋದರ್ ಮತ್ತಿತರರು ಉಪಸ್ಥಿತರಿದ್ದರು. ಮಡಿಕೇರಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಲಯನ್ ಮದನ್ ಮಾದಯ್ಯ ಸ್ವಾಗತಿಸಿ, ಲಯನ್ ಕನ್ನು ಅಪ್ಪಚ್ಚು ಪ್ರಾರ್ಥಿಸಿ, ಕಾರ್ಯದರ್ಶಿ ಲಯನ್ ಕೆ.ಮಧುಕರ್ ವಂದಿಸಿದರು.

ಬಡತನ ರೇಖೆಗಿಂತ ಕೆಳಗಿರುವ ಸುಮಾರು ೧೩ ಬಡ ಹಾಗೂ ಅಗತ್ಯವಿರುವ ಕುಟುಂಬಗಳನ್ನು ಗುರುತಿಸಿ ದಿನಸಿ ಸಾಮಾಗ್ರಿಗಳ ಕಿಟ್ ಮತ್ತು ಕಂಬಳಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭ ಕೊಡಗಿನ ಲಯನ್ಸ್ ಪ್ರಾಂತ್ಯದ ೧೨ ಲಯನ್ಸ್ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಬಡವರಿಗೆ ಹಂಚಿಕೆ ಮಾಡಲೆಂದು ೧೧೦ ಕಿಟ್‌ಗಳನ್ನು ಉಪವಿಭಾಗಾಧಿಕಾರಿಗಳ ಮೂಲಕ ಹಸ್ತಾಂತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net