ತ್ಯಾಜ್ಯ ಬಳಕೆದಾರರ ಶುಲ್ಕ ವಸೂಲಿಗೆ ಸಾರ್ವಜನಿಕರ ಅಕ್ಷೇಪ

Vijayavani-Featured-Image
Published on

ಬೆಂಗಳೂರು: ಮಹಾನಗರದಲ್ಲಿ ಸ್ವತ್ತುದಾರರು ಪಾವತಿಸುತ್ತಿರುವ ಆಸ್ತಿತೆರಿಗೆಯಲ್ಲಿ ಘನತ್ಯಾಜ್ಯ ಸೆಸ್ ಪಾವತಿಸುತ್ತಿದ್ದರೂ, ಪ್ರತ್ಯೇಕವಾಗಿ ತ್ಯಾಜ್ಯ ಬಳಕೆದಾರರ ಶುಲ್ಕ ವಸೂಲು ಮಾಡುವ ಬಿಬಿಎಂಪಿ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ದಿನೇ ದಿನೆ ಕಸ ಉತ್ಪತ್ತಿ ಹೆಚ್ಚುತ್ತಿದೆ. ಉತ್ಪತ್ತಿಯಾದ ಕಸವನ್ನು ಘನತ್ಯಾಜ್ಯ ಘಟಕಗಳಿಗೆ ಸಾಗಣೆ ಮಾಡಿ ವಿಲೇವಾರಿ ಅಥವಾ ವಿಂಗಡಣೆ ಮಾಡುವ ಕಾರ್ಯಕ್ಕೆ ಹೆಚ್ಚಿನ ಸಮಯ ಹಿಡಿಯುತ್ತಿದೆ. ಜತೆಗೆ ಸಂಸ್ಕರಣೆ ಕೂಡ ಜಟಿಲವಾಗುತ್ತಿದೆ ಎಂಬ ನೆಪ ಮಾಡಿ ಹೊಸದಾಗಿ ಮಾಸಿಕ ವಸತಿ ಕಟ್ಟಡಗಳಿಂದ 200 ರೂ. ಸಂಗ್ರಹಿಸುವ ಉದ್ದೇಶ ಇದೆ. ಜತೆಗೆ ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯ ಉತ್ಪಾದನೆ ಪ್ರಮಾಣ ಆಧರಿಸಿ ಕನಿಷ್ಠ 500 ರೂ. ಸಂಗ್ರಹಿಸುವ ಪ್ರಸ್ತಾಪ ಇದೆ. ಈ ವಿಚಾರವಾಗಿ ಬಿಬಿಎಂಪಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ರವಾನಿಸಿದೆ. ಬಳಕೆದಾರರ ಶುಲ್ಕವನ್ನು ಏಕೆ ಹಾಗೂ ಎಷ್ಟು ಪ್ರಮಾಣದಲ್ಲಿ ವಸೂಲು ಮಾಡಲಾಗುತ್ತದೆ ಎಂಬ ಅಂಶಗಳನ್ನು ಮನವರಿಕೆ ಮಾಡಿಕೊಟ್ಟಿದೆ.

ನಗರದಲ್ಲಿ ನಿತ್ಯ 4-5 ಸಾವಿರ ಮೆಟ್ರಿಕ್ ಟನ್ ಘನತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದನ್ನು ವಿಲೇವಾರಿ ಮಾಡುವುದು ಪಾಲಿಕೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಉತ್ಪಾದನೆಗೆ ಎದುರಾಗಿ ತ್ಯಾಜ್ಯ ಸುರಿಯುವ ತಾಣಗಳಾದ ಭೂಭರ್ತಿ ಪ್ರದೇಶಗಳು ಈಗಾಗಲೇ ತುಂಬಿಹೋಗಿವೆ. ಹೊಸ ಭೂಭರ್ತಿ ಸ್ಥಳಗಳನ್ನು ಬಳಸಿಕೊಳ್ಳಲು ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಿಲ್ಲ. ನಗರದಿಂದ ಆಚೆಗೆ ಕಸ ವಿಲೇವಾರಿ ಮಾಡುವ ಇಂಗಿತ ಪಾಲಿಕೆ ಹಾಗೂ ಸರ್ಕಾರದ್ದಾಗಿದೆ. ಆದರೆ, ಕಸ ಉತ್ಪಾದಿಸುವ ಪ್ರದೇಶದಲ್ಲೇ ವಿಂಗಡಣೆ ಹಾಗೂ ಸಂಸ್ಕರಣೆ ಮಾಡಬೇಕೆಂಬ ಈ ಹಿಂದಿನ ಕೋರ್ಟ್ ಆದೇಶವನ್ನು ಪಾಲಿಸದ ಕಾರಣ ತ್ಯಾಜ್ಯ ಸಮಸ್ಯೆ ಬಿಗಡಾಯಿಸುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಪಾಲಿಕೆ ಹೊಸ ತಂತ್ರಜ್ಞಾನದ ಮೂಲಕ ಕಸ ಸಂಸ್ಕರಿಸುವ ವ್ಯವಸ್ಥೆಯನ್ನು ಪರಿಚಯಿಸುವ ಸಲುವಾಗಿ ಹೆಚ್ಚುವರಿ ತೆರಿಗೆಯನ್ನು ನಾಗರಿಕರ ಮೇಲೆ ಹೇರುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಹಿಂದಿನ ಪ್ರಸ್ತಾಪಕ್ಕೂ ವಿರೋಧ:

ಎರಡು ವರ್ಷದ ಹಿಂದೆ ಪಾಲಿಕೆಯು ತ್ಯಾಜ್ಯ ಬಳಕೆದಾರರ ಶುಲ್ಕವನ್ನು ಬೆಸ್ಕಾಂ ಬಿಲ್‌ನೊಂದಿಗೆ ಸೇರಿಸಿ ವಸೂಲು ಮಾಡಲು ಮುಂದಾಗಿತ್ತು. ಇದಕ್ಕಾಗಿ ಬಿಬಿಎಂಪಿ ಹಾಗೂ ಬೆಸ್ಕಾಂ ಸಂಸ್ಥೆಗಳ ಜತೆ ಹಲವು ಸುತ್ತಿನ ಮಾತುಕತೆ ನಡೆದಿತ್ತು. ಆದರೆ, ಶುಲ್ಕ ವಸೂಲು ಮಾಡಿದ ನಂತರ ಆ ಕಾರ್ಯಕ್ಕಾಗಿ ಇಂತಿಷ್ಟು ಹಣ ನೀಡಬೇಕೆಂಬ ವಿಚಾರದಲ್ಲಿ ಒಮ್ಮತ ಮೂಡದ ಕಾರಣ ಆ ಪ್ರಸ್ತಾಪ ಅಲ್ಲಿಗೆ ಮುರಿದುಬಿದ್ದಿತ್ತು. ಈಗ ಪಾಲಿಕೆ ಮತ್ತೆ ಬಳಕೆದಾರರ ಶುಲ್ಕವನ್ನು ವಸೂಲು ಮಾಡಿ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವತ್ತ ಲಕ್ಷ್ಯ ಹರಿಸಿದೆ ಎಂದು ಕೆಲವು ನಾಗರಿಕ ಸಂಘಟನೆಗಳು ಸಿಟ್ಟು ಹೊರಹಾಕಿದೆ.

ವಾಣಿಜ್ಯ ಕಟ್ಟಡಗಳಿಗೆ ಹೊರೆ?:

ನಗರದ ಹಳೆಯ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚಾಗುತ್ತಿದೆ. ಇದರಿಂದ ಕಸ ಉತ್ಪಾದನೆಯೂ ಅಧಿಕಗೊಳ್ಳುತ್ತಿದೆ. ಉತ್ಪತ್ತಿಯಾದ ತ್ಯಾಜ್ಯವನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಹಬ್ಬಹರಿದಿನ, ರಜಾದಿನಗಳಂದು ಪೌರಕಾರ್ಮಿಕರ ಸಂಖ್ಯೆ ಕಡಿಮೆಯಿರುವ ಕಾರಣ ವಿಲೇವಾರಿ ಹಳಿ ತಪ್ಪುತ್ತಿದೆ. ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಅವರಿಂದ ತ್ಯಾಜ್ಯ ವಿಲೇವಾರಿ ಮಾಡಿಸಲು ಹೆಚ್ಚಿನ ಹಣ ವ್ಯಯವಾಗಲಿದೆ. ಇದನ್ನು ವಾಣಿಜ್ಯ ಕಟ್ಟಡಗಳ ಮಾಲೀಕರಿಂದ ವಸೂಲು ಮಾಡುವುದು ಪಾಲಿಕೆಯ ಆಲೋಚನೆಯಾಗಿದೆ. ನಿತ್ಯ ಕೆಜಿವರೆಗೆ ತ್ಯಾಜ್ಯ ಉತ್ಪಾದಿಸುವ ಕಟ್ಟಡಗಳಿಂದ ಮಾಸಿಕ 500 ರೂ. ವಸೂಲು ಮಾಡಲಾಗುತ್ತದೆ. 10 ಕೆಜಿ ವರೆಗಿನ ತ್ಯಾಜ್ಯ ಉತ್ಪಾದನೆಗೆ 1,400 ರೂ. ನಿಗದಿಗೊಳಿಸಲು ಪಾಲಿಕೆ ಮುಂದಾಗಿದೆ. ಈ ರೀತಿ ಕಸ ಉತ್ಪಾದನೆ ಆಧರಿಸಿ ಬಳಕೆದಾರರ ಶುಲ್ಕ ನಿಗದಿ ಮಾಡಿದರೆ ಬೃಹತ್ ಹಾಗೂ ಬಲ್ಕ್ ಉತ್ಪಾದಕರು ಪ್ರತೀ ತಿಂಗಳೂ ಸಾವಿರಾರು ರೂ. ತೆರಬೇಕಾಗುತ್ತಿದೆ. ಇದು ಹೊರೆಯಾಗಲಿರುವ ಕಾರಣ ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ಕೈಗೊಳ್ಳಬೇಕಿದೆ ಎಂದು ವ್ಯಾಪಾರಿಗಳು ಪಾಲಿಕೆಯನ್ನು ಒತ್ತಾಯಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net