

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರದಲ್ಲಿ ಅವೈಜ್ಞಾನಿಕ ರಸ್ತೆಯಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಫ್ಲೈ ಓವರ್ ಹಾಗೂ ಸರ್ವೀಸ್ ರಸ್ತೆ ನಿರ್ಮಾಣ ಬೇಡಿಕೆಯನ್ನು ಸಾರ್ವಜನಿಕರು ಮುಂದಿಟ್ಟಿದ್ದು, ಈ ಕುರಿತು ಅಭಿಪ್ರಾಯ ಸಂಗ್ರಹಕ್ಕಾಗಿ ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಬ್ರಹ್ಮಾವರ ತಾಲೂಕು ಸೌಧದಲ್ಲಿ ಮಂಗಳವಾರ ಸಭೆ ನಡೆಯಿತು.
ಬ್ರಹ್ಮಾವರ ಭದ್ರಗಿರಿಯಿಂದ ಮಾಬುಕಳ ತನಕ ಅತಿ ಶೀಘ್ರದಲ್ಲಿ ಸರ್ವೀಸ್ ರಸ್ತೆ ಮತ್ತು ಫ್ಲೈ ಓವರ್ ನಿರ್ಮಾಣ ಮತ್ತು ಆಕಾಶವಾಣಿ ವೃತ್ತದ ಬಳಿ ಬಾರಕೂರು ರಸ್ತೆಯ ಮಾರ್ಗದ ಕುರಿತು ಶಾಲಾ ಕಾಲೇಜು ಮುಖ್ಯಸ್ದರು, ರೋಟರಿ ಕ್ಲಬ್, ಖಾಸಗಿ ವಾಹನ ಚಾಲಕರು, ಹಿರಿಯ ನಾಗರಿಕರು ಒಟ್ಟಾಗಿ ಗಮನ ಸೆಳೆದರು.
ಇದೇ ಸಂದರ್ಭ ಕಲ್ಯಾಣಪುರ ಕೆಜಿ ರೋಡ್ ರಸ್ತೆಯ ಕುರಿತು ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾ ವೀಕ್ಷಕ ಫ್ರಾೃಂಕಿ ಡಿಸೋಜ ನೇತೃತ್ವದಲ್ಲಿ ಶಾಸಕರಿಗೆ ಮನವಿ ನೀಡಲಾಯಿತು.
ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ, ರಾಷ್ಟ್ರೀಯ ಹೆದ್ದಾರಿ 66ರ ಪ್ರಾಜೆಕ್ಟ್ ಮ್ಯಾನೇಜರ್ ರವಿ ಕುಮಾರ್, ವಾರಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದ ಬಿ.ಆರ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ರಾಜು ಕುಲಾಲ್, ಮುಖಂಡರಾದ ಭುಜಂಗ ಶೆಟ್ಟಿ, ಬಿ.ಎನ್ ಶಂಕರ ಪೂಜಾರಿ ಉಪಸ್ಥಿತರಿದ್ದರು. ಬಿರ್ತಿ ರಾಜೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.