

ಮಡಿಕೇರಿ:
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ಕೆಲಸಗಳನ್ನು ಕಾರ್ಯಾಂಗ ದ ಮೂಲಕ ಪರಿಹರಿಸುವುದು ಶಾಸಕಾಂಗದ ಕರ್ತವ್ಯ ಆಗಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ 'ಜನಸ್ಪಂದನ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಹೇಳಿದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಶನಿವಾರ ನಡೆದ ‘ಜನಸ್ಪಂದನ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಂದಾಯ, ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಲೋಕೋಪಯೋಗಿ, ಸೆಸ್ಕ್, ಆರೋಗ್ಯ, ಶಿಕ್ಷಣ, ಪೌರಾಡಳಿತ, ಗಣಿ… ಹೀಗೆ ಹಲವು ಇಲಾಖೆ ವ್ಯಾಪ್ತಿಯ ಕೆಲಸ-ಕಾರ್ಯಗಳಿಗೆ ಸಾರ್ವಜನಿಕರಿಂದ ಪ್ರತಿನಿತ್ಯ ಹೆಚ್ಚಿನ ಮನವಿ ಸಲ್ಲಿಸುತ್ತಾರೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಶಾಸಕರು ತಿಳಿಸಿದರು.
ಸಾರ್ವಜನಿಕರಿಗೆ ನ್ಯಾಯ ಒದಗಿಸುವುದು ಸರ್ಕಾರದ ಪ್ರಥಮ ಆದ್ಯತೆ ಆಗಿದೆ. ಸಲ್ಲಿಕೆಯಾದ ಅರ್ಜಿಗೆ ಮಾತ್ರ ಸೀಮಿತವಾಗದೆ. ಸ್ಥಳೀಯ ಎಲ್ಲಾ ರೀತಿಯ ಸಮಸ್ಯೆ ಬಗೆಹರಿಸುವುದು ಅತಿಮುಖ್ಯ ಎಂದು ಡಾ.ಮಂತರ್ ಗೌಡ ಅವರು ಪ್ರತಿಪಾದಿಸಿದರು.
ಸರ್ಕಾರಿ ವ್ಯವಸ್ಥೆಯಲ್ಲಿ ಅಧಿಕಾರಿಗಳು ಇಂದು ಬಂದಿಲ್ಲ, ನಾಳೆ ಬನ್ನಿ, ನೋಡುತ್ತೇವೆ, ಮಾಡಿಕೊಡುತ್ತೇವೆ ಎಂಬ ಸಾಬೂಬುಗಳು ಬೇಡ, ಕೆಲಸ ಆಗುವುದಿದ್ದಲ್ಲಿ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ನಿಯಮಾನುಸಾರ ಆಗುವುದಿಲ್ಲ ಎಂದು ಹಿಂಬರಹ ನೀಡಬೇಕು. ಪ್ರತಿ ಕ್ಷೇತ್ರದಲ್ಲಿ ಪಾರದರ್ಶಕತೆ ಇರಬೇಕು. ಆ ದಿಸೆಯಲ್ಲಿ ಸಾರ್ವಜನಿಕರಿಗೆ ಸ್ಪಂದನೆ ಮುಖ್ಯ ಎಂದು ಶಾಸಕರು ನುಡಿದರು.
ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಸಹ ಒಂದು ಬಗೆಹರಿದಲ್ಲಿ, ಮತ್ತೊಂದು ಸಮಸ್ಯೆಗಳು ಉದ್ಬವ ಆಗುತ್ತವೆ. ಆದ್ದರಿಂದ ಭಾರತವು ಮುಂದುವರೆಯುತ್ತಿರುವ ರಾಷ್ಟ್ರವಾಗಿದ್ದು, ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಎಲ್ಲರೂ ಶ್ರಮವಹಿಸಬೇಕಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ಮಾತನಾಡಿ ಸರ್ಕಾರದ ಹಲವು ಕಾರ್ಯಕ್ರಮವನ್ನು ಅರ್ಹರಿಗೆ ತಲುಪಿಸುವುದು ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಸ್ಥಳಿಯ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ತಾಲ್ಲೂಕು ಅಧ್ಯಕ್ಷರಾದ ವಿ.ಪಿ.ಶಶಿಧರ, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಮೋದ್ ಮುತ್ತಪ್ಪ, ಕೆಡಿಪಿ ಸಮಿತಿ ಸದಸ್ಯರಾದ ಸುನಿತಾ, ತಹಶಿಲ್ದಾರರಾದ ಕಿರಣ್ ಗೌರಯ್ಯ, ನವೀನ್ ಕುಮಾರ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.