ವಿದ್ಯುತ್ ದರ ಏರಿಕೆಗೆ ಜನ ಕಂಗಾಲು

DBP01
Published on

ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಮಾಹಿತಿ ನೀಡದೆ ವಿದ್ಯುತ್ ದರ ಏರಿಕೆ ಮಾಡಿರುವ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಕ್ರಮಕ್ಕೆ
ನಗರದ ಬೆಸ್ಕಾಂ ಕಚೇರಿಯಲ್ಲಿ ಆಯೋಜಿಸಿದ್ದ ಬೆಸ್ಕಾಂ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.
ಈ ಹಿಂದೆ ಪ್ರತಿ ಯೂನಿಟ್ ವಿದ್ಯುತ್‌ಗೆ 4.70 ರೂಪಾಯಿ ಪಾವತಿಸಲಾಗುತ್ತಿತ್ತು. ಜೂನ್‌ನಿಂದ ಏಕಾಏಕಿ ಯೂನಿಟ್ ವಿದ್ಯುತ್ ದರ 7 ರೂಪಾಯಿಗೆ ಏರಿಕೆ ಮಾಡಿರುವುದು ಖಂಡನೀಯ ಎಂದು ಗ್ರಾಹಕ ಗೋಪಾಲ್ ಆಕ್ಷೇಪಿಸಿದರು.
ಈಗಾಗಲೇ ಸಂಕಷ್ಟದಲ್ಲಿರುವ ನೇಯ್ಗೆ ಉದ್ಯಮ ವಿದ್ಯುತ್ ದರ ಏರಿಕೆಯಿಂದ ಕಂಗಾಲಾಗಿದೆ. 80 ರೂ.ಇದ್ದ ಒಂದು ಎಚ್‌ಪಿ ವಿದ್ಯುತ್ ದರ ಈಗ 160 ರೂ. ಆಗಿದೆ. ಅಲ್ಲದೇ ಎರಡು ಸ್ಲ್ಯಾಬ್‌ಗಳಲ್ಲಿ ದರ ಏರಿಕೆ ಮಾಡಿರುವುದು ಜನಸಾಮಾನ್ಯರ ಮೇಲೆ ಬರೆ ಎಳೆದಂತಾಗಿದೆ ಎಂದು ಗ್ರಾಹಕ ದಯಾಶಂಕರ್ ಆರೋಪಿಸಿದರು.
ಬೆಸ್ಕಾಂ ಇಲಾಖೆ ಲೆಕ್ಕಾಧಿಕಾರಿ ಪ್ರದೀಪ್ ಪ್ರತಿಕ್ರಿಯಿಸಿ, ಮೇ 12ರಂದು ಕೆಇಆರ್‌ಸಿ ವಿದ್ಯುತ್ ದರ ಏರಿಕೆ ಮಾಡಿದೆ. ಪತ್ರಿಕಾ ಪ್ರಕಟಣೆ ಕೂಡ ನೀಡಿದೆ. ಆಕ್ಷೇಪಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
100 ಯೂನಿಟ್ ಮೇಲಿನ ಪ್ರತಿ ಯೂನಿಟ್ ದರಕ್ಕೆ 7 ರೂ. ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೆಇಆರ್‌ಸಿ ನೀಡಿರುವ ಅಧಿಸೂಚನೆಯಲ್ಲಿ ದರ ಏರಿಕೆಯ ಯಾವುದೇ ಪ್ರಸ್ತಾಪ ಮಾಡಿಲ್ಲ. ಚುನಾವಣೆ ಫಲಿತಾಂಶದ ಹಿಂದಿನ ದಿನ ಯೂನಿಟ್ ದರವನ್ನು 70 ಪೈಸೆ ಹೆಚ್ಚಿಸುವುದಾಗಿ ಹೇಳಿತ್ತು. ಈಗ ಏಕಾಏಕಿ ದರ ಏರಿಸಿರುವುದು ಯಾವ ನ್ಯಾಯ ಎಂದು ಮುಖಂಡ ವೆಂಕಟೇಶ್ ಪ್ರಶ್ನಿಸಿದರು.

ದರ ಏರಿಕೆಯಿಂದ ವಿನಾಯ್ತಿ ನೀಡಿ: ವಿದ್ಯುತ್ ದರ ಏರಿಕೆ ಮಾಡಿರುವ ಕಾರಣ ಹಲವು ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ಜೂನ್ ತಿಂಗಳಲ್ಲಿ ದರ ಏರಿಕೆಗೆ ವಿನಾಯ್ತಿ ನೀಡಬೇಕು ಎಂದು ಮುಖಂಡರು ಮನವಿ ಮಾಡಿದರು.
ವಿನಾಯ್ತಿ ಮನವಿಗೆ ಪ್ರದೀಪ್ ಪ್ರತಿಕ್ರಿಯಿಸಿ, ನಾವು ಕೆಇಆರ್‌ಸಿ ನಿರ್ದೇಶನದಂತೆ ಕ್ರಮ ವಹಿಸಿದ್ದೇವೆ. ಗೃಹಜ್ಯೋತಿ ಯೊಜನೆ ಜಾರಿ ಬಳಿಕ ಎಲ್ಲವೂ ಸರಿ ಹೋಗಲಿದೆ ಎಂದರು. ಬೆಸ್ಕಾಂ ಸಿಬ್ಬಂದಿ ಪ್ರತಿ ತಿಂಗಳ 16 ರೊಳಗೆ ಬಿಲ್ ಪಾವತಿಸುವಂತೆ ಹೇಳುತ್ತಾರೆ. ಆದರೆ, ಬಿಲ್ ಪಾವತಿಯ ಕೊನೇ ದಿನಾಂಕ ಮುಗಿದರೂ ರಶೀದಿ ನೀಡುವುದಿಲ್ಲ. ಕೊನೆಗೆ ವಿಳಂಬ ಕಾರಣ ನೀಡಿ ಪೆನಾಲ್ಟಿ ಹಾಕುತ್ತಾರೆ ಎಂದು ಗ್ರಾಹಕರು ದೂರಿದರು.

ಸಭೆಗೆ ಗೈರಾದ ಎಇಇ ಮಂಜುನಾಥ್ ಬೆಸ್ಕಾಂ ಗ್ರಾಹಕರ ಕುಂದುಕೊರತೆ ಸಭೆ ಕರೆದಿದ್ದ ಎಇಇ ಮಂಜುನಾಥ್ ಅವರು ಸಭೆಗೆ ಗೈರಾಗಿದ್ದರು. ರೈತ ಮುಖಂಡರು ಹಾಗೂ ಸಾರ್ವಜನಿಕರ ಬೆಲೆ ಏರಿಕೆ ಕುರಿತ ಪ್ರತಿ ಆಕ್ಷೇಪಕ್ಕೆ ಬೆಸ್ಕಾಂ ಅಧಿಕಾರಿಗಳು ಕೆಇಆರ್‌ಸಿ ಅಧಿಕಾರಿಗಳತ್ತ ಬೊಟ್ಟು ಮಾಡುತ್ತಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net