ಸಮಸ್ಯೆ ಬಗೆಹರಿಸಲು ಆ್ಯಪ್ ಅಭಿವೃದ್ಧಿ: ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿಕೆ

Public meeting by MLA Mandya
Published on

ಮಂಡ್ಯ: ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಆ್ಯಪ್ ಅಭಿವೃದ್ಧಿಪಡಿಸಲಾಗಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ತಾಲೂಕಿನ ದುದ್ದ ಗ್ರಾಮ ಪಂಚಾಯಿತಿ ಆವರಣದಲ್ಲಿ ‘ಸರ್ಕಾರಿ ಕಚೇರಿಗಳಿಗೆ ನೀವು ಬರಬೇಡಿ, ಕಚೇರಿಯೇ ನಿಮ್ಮ ಮನೆ ಬಾಗಿಲಿಗೆ ಬರಲಿದೆ’ ಎನ್ನುವ ಶೀರ್ಷಿಕೆಯಡಿ ಆಯೋಜಿಸಲಾಗಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನರ ಸಮಸ್ಯೆಗಳನ್ನು ನಮೂದಿಸಿದರೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಾರೆ. ಮಾತ್ರವಲ್ಲದೆ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂದರು.

ದುದ್ದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1,310ಕ್ಕೂ ಹೆಚ್ಚು ಮನೆಗಳಿವೆ. ಈಗಾಗಲೇ ಅಧಿಕಾರಿಗಳು ದುದ್ದ ಗ್ರಾಮ ಪಂಚಾಯಿತಿಯ ಶೇ.90ರಷ್ಟು ಮನೆಗಳಿಗೆ ತೆರಳಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಆ್ಯಪ್‌ನಲ್ಲಿ ನಮೂದಿಸಿದ್ದಾರೆ. ಸಮಸ್ಯೆ ಹೊಂದಿರುವ ಸಾರ್ವಜನಿಕರಲ್ಲಿ ಶೇ.80ರಷ್ಟು ಜನರು ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಾರೆ. ಶೇ.20ರಷ್ಟು ಜನರು ಮಾತ್ರ ಶಾಸಕರ ಹಾಗೂ ಸರ್ಕಾರಿ ಕಚೇರಿಗಳಿಗೆ ತೆರಳಿ ಅರ್ಜಿ ಸಲ್ಲಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಿಗೆ ನೀವು ಬರಬೇಡಿ ಕಚೇರಿಯೇ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅಧಿಕಾರಿಗಳಲ್ಲಿ ಅರ್ಜಿ ಕೊಟ್ಟರೆ ಮಾತ್ರ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬ ಮನೋಭಾವನೆ ಇದೆ. ಇದನ್ನು ಹೋಗಲಾಡಿಸಲು ಹೊಸ ಆ್ಯಪ್ ಅಭಿವೃದ್ಧಿಪಡಿಸಿದ್ದೇವೆ. ಆ್ಯಪ್‌ನಲ್ಲಿ ಸಮಸ್ಯೆಗಳನ್ನು ತಿಳಿಸಿದರೆ ಸಂಬಂಧಪಟ್ಟ ಅಧಿಕಾರಿಗಳು ಅದರ ನಿವಾರಣೆಗೆ ಕ್ರಮ ಕೈಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರೆ ಆ್ಯಪ್ ಬಳಸಿ ತಮ್ಮ ಸಮಸ್ಯೆಗಳನ್ನು ನಮೂದಿಸಬಹುದಾಗಿದೆ. ಅಧಿಕಾರಿಗಳು ರೈತರ ಬಳಿ ಹೋಗಿ ಬೆಳೆ ಪದ್ಧತಿ ಬದಲಾವಣೆಯಿಂದ ಉಂಟಾಗುವ ಆದಾಯ ಹೆಚ್ಚಳ ಕುರಿತು ಮಾಹಿತಿ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೆಚ್ಚಾಗಿ ಜಮೀನಿಗೆ ಹೋಗಲು ದಾರಿ ಇಲ್ಲವೆಂದು ರೈತರು ತಿಳಿಸಿದ್ದಾರೆ. ನಕ್ಷೆಯಲ್ಲಿ ದಾರಿ ಇದ್ದು, ಒತ್ತುವರಿ ಮಾಡಿದ್ದಾರೆ ತೆರವುಗೊಳಿಸಲಾಗುವುದು. ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ನಮ್ಮ ಗ್ರಾಮಗಳಲ್ಲಿ ಸ್ಮಶಾನ ಇಲ್ಲವೆಂದು ಹೇಳುತ್ತಾರೆ. ನಿಮ್ಮ ಗ್ರಾಮಗಳಲ್ಲಿ ಸ್ಮಶಾನ ಇಲ್ಲವಾದರೆ ಆರ್.ಟಿ.ಸಿ ಯಲ್ಲಿರುವ ಸರ್ಕಾರಿ ಜಾಗಗಳನ್ನು ಪರೀಶೀಲನೆ ನಡೆಸಲಾಗುವುದು. ಒಂದು ವೇಳೆ ಯಾರಾದರೂ ಸ್ಮಶಾನ ಒತ್ತುವರಿ ಮಾಡಿದ್ದಾರೆ, ಒತ್ತುವರಿಯನ್ನು ತೆರೆವುಗೊಳಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮಂಡ್ಯ ತಹಸೀಲ್ದಾರ್ ವಿಶ್ವನಾಥ್ ಮಾತನಾಡಿ, ಶಾಸಕರು ಕಳೆದ 6 ಗ್ರಾಮ ಪಂಚಾಯಿತಿಯಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇದು 7 ಗ್ರಾಮ ಪಂಚಾಯಿತಿ. ಮೊದಲೆಲ್ಲ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ವಿ.ಐ, ಆರ್.ಐ, ಪಿಡಿಒಗಳ ಕಚೇರಿ ತಿರುಗಬೇಕಿತ್ತು. ಆದರೆ ಈಗ ಆಧಿಕಾರಿಗಳೇ ನಿಮ್ಮ ಮನೆಗಳಿಗೆ ಬಂದು ಸಮಸ್ಯೆ ಆಲಿಸಿ ಪರಿಹಾರ ನೀಡುವ ಕಾರ್ಯಕ್ರಮವಿದು. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಅವರು ಆನ್‌ಲೈನ್ ಮೂಲಕ ಪೌತಿ ಖಾತೆ ಮಾಡಿಸಿಕೊಳ್ಳಲು ಅನುವು ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ಪೌತಿ ಖಾತೆ ಪಡೆಯಲು ಮುಖ್ಯವಾಗಿ ವಂಶವೃಕ್ಷ, ಮರಣ ಪ್ರಮಾಣ ಪತ್ರ ನಿಮ್ಮ ಬಳಿ ಇದ್ದರೆ ಕೇವಲ 15 ದಿನಗಳಲ್ಲಿ ಪೌತಿ ಖಾತೆ ದೊರೆಯುತ್ತದೆ. ನಿಮ್ಮ ಜಾಮೀನುಗಳನ್ನು ದುರಸ್ತಿ ಮಾಡುವುದು. ಈಗ ಆನ್‌ಲೈನ್ ಆಗಿರುವುದರಿಂದ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಮಂಡ್ಯ ತಾಲೂಕು ಪಂಚಾಯಿತಿ ಇಒ ಲೋಕೇಶ್‌ಮೂರ್ತಿ ಮಾತನಾಡಿ, ಗ್ರಾಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಎರಡು ವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನರು ತಮ್ಮ ಊರಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಶಾಸಕರು ಹಾಗೂ ಅಧಿಕಾರಿಗಳ ಕಚೇರಿಯನ್ನು ಅಲೆದಾಟವನ್ನು ತಪ್ಪಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮರ್ಪಕವಾಗಿ ಕೆಲಸಗಳನ್ನು ಮಾಡುತ್ತೇವೆ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಚಲುವಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಸೌಭಾಗ್ಯಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ, ಶಿಶು ಯೋಜನಾ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ಎಂ.ಉದಯ್‌ಕುಮಾರ್, ಮೀನುಗಾರಿಕೆ ಸಹಾಯಕ ನಿರ್ದೇಶಕ ಲೋಕೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಲಿಂಗೇಗೌಡ ಸೇರಿದಂತೆ ಇತರರಿದ್ದರು. ಇದೇ ವೇಳೆ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಪರಿಹರಿಸಲು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚಿಸಿದರು.

ಸರ್ಕಾರಿ ವ್ಯವಸ್ಥೆಯಲ್ಲಿ ಅರ್ಜಿ ಕೊಟ್ಟ ಮೇಲೆ, ಸೇವೆಯನ್ನು ಒದಗಿಸಬೇಕು ಎಂಬಂತಾಗಿದೆ. ಅಧಿಕಾರಿಗಳ ಮನಸ್ಸಿನಲ್ಲಿ ಇದೇ ಭಾವನೆ ಇದೆ. ಸಾಮಾನ್ಯ ಜನರಲ್ಲೂ ಇದೇ ಭಾವನೆ ಇದೆ. ಈ ಮನಸ್ಥಿತಿ ಬದಲಾಗಬೇಕು. ಅರ್ಜಿ ನೀಡದೆಯೇ ಸರ್ಕಾರ ಸೌಲಭ್ಯಗಳನ್ನು ಅವರ ಮನೆ ಬಾಗಿಲಿಗೇ ತಲುಪಿಸುವ ಪ್ರಯತ್ನವಾಗಿ ‘ಸರ್ಕಾರಿ ಸೇವೆ ಮನೆ ಬಾಗಿಲಿಗೆ’ ನಡೆಯುತ್ತಿದೆ. ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net