

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸಾರ್ವಜನಿಕರು ಸಲ್ಲಿಸುವ ಅಹವಾಲುಗಳನ್ನು ಸಕಾಲದಲ್ಲಿ ಇತ್ಯರ್ಥಪಡಿಸಬೇಕು ವಿನಾಕಾರಣ ವಿಳಂಬ ಮಾಡಬಾರದು ಅಂಥ ಆರೋಪಗಳು ಕೇಳಿ ಬಂದರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಎಚ್ಚರಿಕೆ ನೀಡಿದರು.
ದೇವನಹಳ್ಳಿಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಢಿದ್ದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು. ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಾರೆ ಸುಖಾಸುಮ್ಮನೆ ಅಲೆದಾಡಿಸುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿರುತ್ತವೆ. ಇದನ್ನು ಸಹಿಸುವುದಿಲ್ಲ. ಇಂಥ ಆರೋಪಗಳು ಮರುಕಳಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪುನರುಚ್ಚರಿಸಿದರು. ಸಾರ್ವಜನಿಕರು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ನಮ್ಮ ಸರ್ಕಾರ ಜನಸ್ಪಂದನ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿದೆ. ಒಂದೇ ವೇದಿಕೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಇದ್ದು ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ.
ಸಮಯ ನಿಗಧಿಪಡಿಸಬೇಕು: ಸಾರ್ವಜನಿಕರು ಸಮಸ್ಯೆ ಹೊತ್ತು ಅಧಿಕಾರಿಗಳ ಬಳಿ ಬರುತ್ತಾರೆ. ಅಧಿಕಾರಿಗಳು ಸಾರ್ವಜನಿಕರ ಭೇಟಿಗೆ ಸಮಯ ನಿಗಧಿಪಡಿಸಬೇಕು. ಯಾವುದೋ ವೇಳೆ ಹೇಳಿ ಇನ್ಯಾವುದೋ ವೇಳೆಗೆ ಬರುವುದು ಗಂಟೆಗಟ್ಟಲೆ ಸಾರ್ವಜನಿಕರನ್ನು ಕಾಯಿಸುವುದು ಮಾಡಬಾರದು. ಇಂಥ ವರ್ತನೆಗಳನ್ನು ಸಹಿಸುವುದಿಲ್ಲ ಎಂದ ಸಚಿವರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಸಮಸ್ಯೆಗಳಿಗೆ ತ್ವರಿತ ಪರಿಹಾರೋಪಾಯ ಕಂಡು ಕೊಳ್ಳಬೇಕು. ಕೋರ್ಟ್ ಪೊಲೀಸ್ ತನಿಖೆ ಮುಂತಾದ ಅಹವಾಲುಗಳನ್ನು ಬಿಟ್ಟು ಉಳಿದ ಅರ್ಜಿಗಳನ್ನು ಪರಿಶೀಲಿಸಿ ತ್ವರಿತವಾಗಿ ವಿಲೇವಾರಿ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಿವೇಶನ, ವಸತಿ ರಹಿತರಿಗೆ ಆದ್ಯತೆ: ದೇವನಹಳ್ಳಿ ತಾಲೂಕಿಗೆ 1 ಸಾವಿರ ಮನೆ ಮಂಜೂರು ಮಾಡಲಾಗಿದೆ. ಆದಷ್ಟು ಶೀಘ್ರ ಅದನ್ನು ವಸತಿ ರಹಿತ ಅರ್ಹರಿಗೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಲ್ಲ ತಯಾರಿ ಮಾಡಿಕೊಳ್ಳಬೇಕು ಸರ್ಕಾರ ಸೂರು ನೀಡುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆ ಇಟ್ಟಿದೆ ಇದನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಸಚಿವರು ಸೂಚಿಸಿದರು. 2500 ನಿವೇಶನ ನೀಡುವ ಗುರಿ ಹೊಂದಲಾಗಿದ್ದು ನಿವೇಶನ ಅಭಿವೃದ್ಧಿ ಪಡಿಸುವ ಕಾರ್ಯ ಭರದಿಂದ ಸಾಗಿದೆ. ಕೆಲವು ಭಾಗಗಳಲ್ಲಿ ಕೋರ್ಟ್ ಪ್ರಕರಣಗಳಿಗೆ, ಅರಣ್ಯ ಒತ್ತುವರಿ ಅಡೆತಡೆ ಆಗುತ್ತಿದೆ. ಅಂತಹ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ವಿಶೇಷ ಪ್ರಾತಿನಿಧ್ಯ ನೀಡಬೇಕು ಎಂದರು.
ಜಂಟಿ ಸರ್ವೆ ನಡೆಸಿ: ದೇವನಹಳ್ಳಿಯ ಗೊಬ್ಬರಗುಂಟೆಯಲ್ಲಿ ನಿವೇಶನ ಹಂಚಿಕೆಗೆ ಗುರುತಿಸಿರುವ ಜಾಗವು ಈ ಹಿಂದೆಯೇ ಮಂಜೂರಾಗಿ ಹಕ್ಕು ಪತ್ರ ನೀಡಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಇದರ ಬಗ್ಗೆ ತಹಸೀಲ್ದಾರ್ ಸರ್ವೇ ಅಧಿಕಾರಿಗಳು ಹಾಗೂ ಅರಣ್ಯ ಅಧಿಕಾರಿಗಳು ಜಂಟಿಯಾಗಿ ಸರ್ವೆ ಕಾರ್ಯ ನಡೆಸಿ ವಾಸ್ತವ ಸ್ಥಿತಿ ಬಗ್ಗೆ ವರದಿ ನೀಡಬೇಕು ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ಕಡೆ ಗಮನ ನೀಡಬೇಕು ಎಂದು ಕೆ.ಎಚ್.ಮುನಿಯಪ್ಪ ತಾಕೀತು ಮಾಡಿದರು. ಕೊಡಗುರ್ಕಿಯಲ್ಲಿ 6 ಎಕರೆ ನಿವೇಶನಕ್ಕೆ ಜಾಗ ಮಂಜೂರಾಗಿದ್ದು ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಹಾಗೇ ಉಳಿದಿದೆ, ಅದನ್ನು ಒಂದು ವಾರದಲ್ಲಿ ಸರಿಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ವಸತಿ ಆಗಲಿ ಅಥವಾ ನಿವೇಶನ ಆಗಲಿ ಅರ್ಹ ಬಡವರಿಗೆ, ನಿವೇಶನ ರಹಿತರಿಗೆ, ವಸತಿ ರಹಿತರಿಗೆ ಸಿಗಬೇಕು. ಫಲಾನುಭವಿಗಳ ಆಯ್ಕೆ ನಿಷ್ಪಕ್ಷಪಾತವಾಗಿರಬೇಕು. ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೇ ಅರ್ಹ ಫಲಾನುಭವಿಗಳ ಆಯ್ಕೆ ಮಾಡಿ ಎಂದರು.