ವಿಳಂಬ ಮಾಡದೆ ವಿಲೇವಾರಿ ಮಾಡಿ

meeting
ದೇವನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕುಂದುಕೊರತೆ ಸಭೆಯಲ್ಲಿ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಪಾಲ್ಗೊಂಡಿದ್ದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ(ಬಯಪ) ಅಧ್ಯಕ್ಷ ಶಾಂತಕುಮಾರ್, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ ಇದ್ದರು
Published on

ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸೂಚನೆ

ದೇವನಹಳ್ಳಿಯಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸಾರ್ವಜನಿಕರು ಸಲ್ಲಿಸಿರುವ ಅಹವಾಲುಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಿಳಂಬ ಮಾಡದೆ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರ ಇತ್ಯರ್ಥ ಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ದೇವನಹಳ್ಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು. ಸಾರ್ವಜನಿಕರು ಜನಸ್ಪಂದನ ಸಭೆಗಳಲ್ಲಿ ಸಲ್ಲಿಸುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಶೀಘ್ರ ಬಗೆಹರಿಸಲಾಗುವುದು ಎಂದ ಸಚಿವರು ಆಯಾ ಇಲಾಖೆ ಅಧಿಕಾರಿಗಳು ಸಂಬಂಧಪಟ್ಟ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ವಿನಾಕಾರಣ ಕಡತಗಳನ್ನು ಇಟ್ಟುಕೊಂಡು ಜನರನ್ನು ಅಲೆದಾಡಿಸಬಾರದು ಇಂಥ ಆರೋಪ ಕೇಳಿಬಂದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚು ಕೇಳಿಬರುತ್ತವೆ, ಕಂದಾಯ ಇಲಾಖೆ ಎಲ್ಲ ಇಲಾಖೆಗಳಿಗೂ ಮಾತೃ ಇಲಾಖೆಯಾಗಿದೆ. ಆದ್ದರಿಂದ ಇಲಾಖೆಯ ಅಧಿಕಾರಿಗಳು ಹೆಚ್ಚು ಗಮನ ನೀಡಿ ಕರ್ತವ್ಯ ನಿರ್ವಹಿಸಬೇಕು. ರೈತಾಪಿ ವರ್ಗದವರು ಕೆಲಸ ಕಾರ್ಯ ಬಿಟ್ಟು ಕಚೇರಿಗಳಿಗೆ ಅಲೆಯುವಂತೆ ಮಾಡಬಾರದು ಎಂದು ಸಚಿವರು ತಾಕೀತು ಮಾಡಿದರು.
ಪ್ರಜೆಗಳ ಸೇವೆ: ಪ್ರಜೆಗಳ ಸೇವೆ ಮಾಡುವ ದೃಷ್ಟಿಯಿಂದ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾರ್ವಜನಿಕರು ಸಮಸ್ಯೆಗಳನ್ನು ಹೊತ್ತು ಪ್ರತಿನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಜನರ ಬಳಿಗೆ ಸರ್ಕಾರವನ್ನು ಕಳುಹಿಸಿ ಪ್ರಜೆಗಳ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಸ್ಥಳದಲ್ಲಿಯೇ ಪರಿಹರಿಸುವ ಸಲುವಾಗಿ ನಿಟ್ಟಿನಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಸಭೆ ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದರು.
ಪೋಡಿ ಕಾರ್ಯ, ಒತ್ತುವರಿ ತೆರವು, ಸ್ಮಶಾನ ಭೂಮಿ ಅಭಿವೃದ್ಧಿ, ಹಕ್ಕು ಪತ್ರ ವಿತರಣೆ ,ಸಾಗುವಳಿ ಚೀಟಿ ವಿತರಣೆ, ಜಮೀನು ಸರ್ವೇಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸಮಯ ನಿಗದಿ ಪಡಿಸಿ ಸಮಸ್ಯೆ ಬಗೆಹರಿಸಲಾಗುವುದು. ನಿವೇಶನ ರಹಿತ, ವಸತಿ ರಹಿತರಿಗೆ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ಹೇಳಿದರು.
77 ಅರ್ಜಿ ಸ್ವೀಕಾರ
ಸರ್ಕಾರಿ ಜಾಗ ಒತ್ತುವರಿ, ಪೋಡಿ ಪ್ರಕರಣ, ಜಮೀನು ತಕರಾರು, ಜಮೀನು ಸರ್ವೆ ಕಾರ್ಯ, ಸ್ಮಶಾನ ಜಾಗ ಹಾಗೂ ರಸ್ತೆ ವ್ಯವಸ್ಥೆ, ಗೋಮಾಳ ಒತ್ತುವರಿ, ಹಕ್ಕು ಪತ್ರ ಹಂಚಿಕೆ, ಕೊಳವೆ ಬಾವಿ ಹಂಚಿಕೆ, ನಿವೇಶನ ಹಂಚಿಕೆ, ಚರಂಡಿ ನಿರ್ಮಾಣ ಮುಂತಾದ ಇತರೆ ಮೂಲಸೌಕರ್ಯ ಸಮಸ್ಯೆಗಳು, ಸೇರಿ 77 ಅಹವಾಲುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಯಿತು. ಬೆಳಗ್ಗೆ 10 ಗಂಟೆಗೆ ಆರಂಭವಾದ ಸಾರ್ವಜನಿಕರ ಕುಂದುಕೊರತೆ ಸಭೆ ಮಧ್ಯಾಹ್ನ ಭೋಜನದ ವಿರಾಮದ ಬಳಿಕ ಮುಂದುವರೆಯಿತು. ದೇವನಹಳ್ಳಿ ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಸಾರ್ವಜನಿಕರು ಸಚಿವರ ಮುಂದೆ ಅಹವಾಲು ತೋಡಿಕೊಂಡರು, ಅಧಿಕಾರಿಗಳು ಪ್ರತಿಯೊಬ್ಬರ ಅರ್ಜಿಗಳನ್ನು ಸ್ವೀಕರಿಸಿ ಸಮಸ್ಯೆ ಪರಿಹಾರಕ್ಕೆ ಕಾಲಾವಧಿ ಕೋರಿದರು. ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಲಾಯಿತು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net