ದರ ಏರಿಕೆ ಆತಂಕದಲ್ಲಿ ಸಾರ್ವಜನಿಕರು: ಪ್ರಸನ್ನಕುಮಾರ್ ಕಿಡಿ

k-b-prasanna-kumar
ಜೆಡಿಎಸ್ ಕೋರ್ ಕಮಿಟಿ ಸದಸ್ಯ ಕೆ.ಬಿ.ಪ್ರಸನ್ನಕುಮಾರ್
Published on

ಶಿವಮೊಗ್ಗ: ಪೆಟ್ರೋಲ್, ಡೀಸೆಲ್, ಹಾಲಿನ ದರ ಏರಿಸಿರುವ ರಾಜ್ಯ ಸರ್ಕಾರ ನಾಳೆ ಇನ್ನೇನು ಏರಿಕೆ ಮಾಡುತ್ತೋ ಎಂಬ ಆತಂಕದಲ್ಲಿ ಜನರು ಬದುಕುವಂತಾಗಿದೆ. ವರ್ಷದ ಸಾಧನೆ ಹೇಳಬೇಕಾದ ಸರ್ಕಾರ ದರ ಏರಿಕೆಯ ಶಾಪಕ್ಕೆ ಒಳಗಾಗುತ್ತಿದೆ ಎಂದು ಜೆಡಿಎಸ್ ಕೋರ್ ಕಮಿಟಿ ಸದಸ್ಯ ಕೆ.ಬಿ.ಪ್ರಸನ್ನಕುಮಾರ್ ಕಿಡಿಕಾರಿದರು.

ಬಿಜೆಪಿ ಸರ್ಕಾರ ದುಬಾರಿ ಎಂದು ಜರಿದು ರಾಜ್ಯದಲ್ಲಿ 135 ಸೀಟುಗಳೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ಮತ್ತೆ ಅದಕ್ಕಿಂತ ಹೆಚ್ಚಿನ ದರ ಏರಿಕೆ ಮಾಡುತ್ತಿದೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರತಿ ಜಿಲ್ಲೆಯಲ್ಲೂ ಹೊಸ ಯೋಜನೆಗಳು ಮರೀಚಿಕೆಯಾಗಿವೆ. ಶಾಸಕರು ಯಾವುದೇ ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸರ್ಕಾರ ಇರುವ ಸಾರ್ವಜನಿಕ ಆಸ್ತಿಗಳನ್ನೂ ಮಾರಾಟಕ್ಕೆ ಮುಂದಾಗಿದೆ ಎಂದು ದೂರಿದರು. ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ನಗರ ಅಧ್ಯಕ್ಷ ದೀಪಕ್ ಸಿಂಗ್, ವಕ್ತಾರ ನರಸಿಂಹ ಗಂಧದಮನೆ, ಕಶ್ಯಪ್, ದಯಾನಂದ್, ನಿಹಾಲ್, ಸುನೀಲ್, ಸಂಗಯ್ಯ ಸುದ್ದಿಗೋಷ್ಠಿಯಲ್ಲಿದ್ದರು.
ಅಸ್ತಿತ್ವ ಕಳೆದುಕೊಳ್ಳುತ್ತಿದೆ ಪಾಲಿಕೆ: ಶಿವಮೊಗ್ಗ ಮಹಾನಗರ ಪಾಲಿಕೆ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಸ್ವಚ್ಛತೆ ಕಣ್ಮರೆಯಾಗಿದೆ. ಸ್ಮಾರ್ಟ್‌ಸಿಟಿ ಎನಿಸಿಕೊಂಡರೂ ಗಲೀಜು ಹೆಚ್ಚಿದೆ. ಡೆಂಘೆ ವಿಪರೀತವಾಗಿದ್ದು ಸಣ್ಣಪುಟ್ಟ ಕ್ಲೀನಿಕ್‌ಗಳು ತುಂಬಿರುತ್ತವೆ. ಅಧಿಕಾರಿಗಳ ಅಂಕಿಅಂಶ ನೀಡಬಹುದು. ಆದರೆ ಆಸ್ಪತ್ರೆಯಲ್ಲಿ ಕಾಲಿಡಲು ಅವಕಾಶವಿಲ್ಲದಂತಾಗಿದೆ ಎಂದು ಕೆ.ಬಿ.ಪ್ರಸನ್ನಕುಮಾರ್ ಆತಂಕ ವ್ಯಕ್ತಪಡಿಸಿದರು. ಹೂವಿನ ಮಾರ್ಕೆಟ್ ಕಟ್ಟಡವನ್ನು ತ್ವರಿತವಾಗಿ ಆರಂಭಿಸಬೇಕು. ಅಣ್ಣಾನಗರ, ಟ್ಯಾಂಕ್ ಮೊಹಲ್ಲ, ಆರ್‌ಎಂಎಲ್ ನಗರ ಸೇರಿ ಹಲವೆಡೆ ಹಾದು ಹೋಗಿರುವ ರಾಜಾಕಾಲುವೆಯ ಹೂಳು ತೆಗೆಸುವಂತೆ ಆಗ್ರಹಿಸಿದರು. ಶಿವಮೊಗ್ಗ ನಗರದಲ್ಲಿ 24*7 ಯೋಜನೆ, ಯುಜಿಡಿ ಕನೆಕ್ಷನ್ ಸರಿ ಇಲ್ಲ. ದೊಡ್ಡಮಟ್ಟದ ಹಣ ವ್ಯಯವಾಗುತ್ತಿದೆ ಎಂದು ದೂರಿದರು.

ಅತ್ಯಾಧುನಿಕ ಕಟ್ಟಡ ನಿರ್ಮಿಸಿ
ಚೋರ್ ಬಜಾರ್‌ನ ಅಗ್ನಿ ದುರಂತ ದುರ್ದೈವದ ಸಂಗತಿ. ಮುಂದಿನ ದಿನಗಳಲ್ಲಿ ಹೊಸದಾಗಿ ಬಜಾರ್‌ನಲ್ಲಿ ಹೂವಿನ ಮಾರ್ಕೆಟ್ ಮಾದರಿ ಕಟ್ಟಡ ನಿರ್ಮಿಸಬೇಕು. ಈಗಿರುವ ಅಂಗಡಿಯವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು. ನೂತನ ಆಯುಕ್ತರು, ಜಿಲ್ಲಾಧಿಕಾರಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಸದಸ್ಯ ಕೆ.ಬಿ.ಪ್ರಸನ್ನಕುಮಾರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net