

ದೇವದುರ್ಗ: ಕೃಷ್ಣಾನದಿಯಲ್ಲಿ ನೀರಿನ ಪ್ರಮಾಣ ಅಧಿಕವಾಗಿದ್ದು, ನೆರೆ ಆತಂಕ ಮನೆಮಾಡಿದೆ. ಇಂಥ ಹೊತ್ತಿನಲ್ಲಿ ಸಾಂಕ್ರಾಮಿಕ ರೋಗಗಗ ಭಯವಿದ್ದು, ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಡಿಎಚ್‌ಒ ಸುರೇಂದ್ರಬಾಬು ಸೂಚಿಸಿದರು.
ಕೃಷ್ಣಾನದಿಗೆ ಅಪಾರ ಪ್ರಮಾಣ ನೀರು ಹರಿಸಿದ ಹಿನ್ನೆಲೆಯಲ್ಲಿ ನದಿದಂಡೆ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಎಲ್ಲ ನದಿದಂಡೆ ಗ್ರಾಮಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ಅಲ್ಲಿನ ವಾತಾವರಣ, ಸೊಳ್ಳೆಗಳ ಉತ್ಪತ್ತಿ, ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರಿಕೆ ವಹಿಸಿ ಜನರಲ್ಲಿ ಅರಿವು ಮೂಡಿಸಬೇಕು. ನದಿಪಾತ್ರ ಗ್ರಾಮಗಳಲ್ಲಿ ರೋಗದ ಭೀತಿ ಇದೆ. ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ಸಹಾಯವಾಣಿ ತೆರೆಯುವಂತೆ ಸೂಚನೆ ನೀಡಿದರು.
ಕೂಡಲೇ ನದಿ ಪಾತ್ರದ ಹಳ್ಳಿಗಳ ಸರ್ವೇ ಮಾಡಿ. ಸಮುದಾಯ ಆರೋಗ್ಯ ಅಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗ ಭೇಟಿ ನೀಡಿ ಆರೋಗ್ಯ ಶಿಕ್ಷಣ ನೀಡಬೇಕು ಎಂದು ಡಿಎಚ್‌ಒ ತಾಕೀತು ಮಾಡಿದರು.
ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಕೆ.ಗಣೇಶ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಯಶೋದಾ, ತಾಲೂಕು ಆರೋಗ್ಯಾಧಿಕಾರಿ ಡಾ.ಬನದೇಶ್ವರ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಭೂಮನಗುಂಡ ಇತರರಿದ್ದರು.