ವಿಪ ಸದಸ್ಯ ಐವನ್​ ಡಿಸೋಜಾಗೆ ಜು.7ರಂದು ಅಭಿನಂದನೆ

UDP-Kristha
ಉಡುಪಿಯ ಪ್ರೆಸ್​ಕ್ಲಬ್​ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕ್ರೈಸ್ತ ಮುಂದಾಳು ವೆರೋನಿಕಾ ಕರ್ನೆಲಿಯೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಫಾದರ್​ ವಂ.ಫರ್ಡಿನಾಂಡ್​ ಗೊನ್ಸಾಲ್ವಿಸ್, ಪ್ರಶಾಂತ ಜತ್ತನ್ನ, ವಂ.ಡೆನಿಸ್​ ಡೆಸಾ, ಸಂತೋಷ್​ ಕರ್ನೆಲಿಯೊ ಇದ್ದರು.
Published on

ಉಡುಪಿ ಧರ್ಮಪ್ರಾಂತ್ಯದ ಫಾದರ್​ ವಂ.ಫರ್ಡಿನಾಂಡ್​ ಗೊನ್ಸಾಲ್ವಿಸ್​ ಮಾಹಿತಿ

ಉಡುಪಿ: ವಿಧಾನ ಪರಿಷತ್​ ನೂತನ ಸದಸ್ಯ ಐವನ್​ ಡಿಸೋಜಾ ಅವರಿಗೆ ಕ್ರೈಸ್ತ ಸಮುದಾಯದ ವತಿಯಿಂದ ಜು.7ರಂದು ಸಂಜೆ 4 ಗಂಟೆಗೆ ಉಡುಪಿಯ ಬಾಸೆಲ್​ ಮಿಷನ್​ ಮೆಮೋರಿಯಲ್​ ಆಡಿಟೋರಿಯಂನಲ್ಲಿ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಫಾದರ್​ ವಂ.ಫರ್ಡಿನಾಂಡ್​ ಗೊನ್ಸಾಲ್ವಿಸ್​ ತಿಳಿಸಿದರು.

ಉಡುಪಿಯ ಪ್ರೆಸ್​ಕ್ಲಬ್​ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಖಿಲ ಕರ್ನಾಟಕ ಯುನೈಟೆಡ್​ ಕ್ರಿಶ್ಚಿಯನ್​ ಫೋರಮ್​ ಫಾರ್​ ಹ್ಯೂಮನ್​ ರೈಟ್ಸ್​ ಉಡುಪಿ, ಸಿಎಎಸ್​ಐ, ಯುಬಿಎಂಸಿ, ಆರ್ಥೊಡಾಕ್ಸ್​ ಸಿರಿಯನ್​ ಚರ್ಚ್​, ಕೆಥೊಲಿಕ್​ ಸಭಾ ಉಡುಪಿ ಪ್ರದೇಶ, ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್​ ಸ್ತ್ರೀ ಸಂಘಟನೆ, ಭಾರತೀಯ ಕೆಥೊಲಿಕ್​ ಯುವ ಸಂಚಾಲನ, ಹಾಗೂ ಉಡುಪಿ ಜಿಲ್ಲೆಯ ಸಮಾನ ಮನಸ್ಕ ಜನರು ಜಂಟಿಯಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ಮಾಹಿತಿ ನೀಡಿದರು.

ಉಡುಪಿ ಧರ್ಮಪ್ರಾಂತ್ಯದ ಬಿಷಪ್​ ಜೆರಾಲ್ಡ್​ ಐಸಾಕ್​ ಲೋಬೋ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ವಿನಯಕುಮಾರ್​ ಸೊರಕೆ, ವಂ.ಐವನ್​ ಸೋನ್ಸ್​, ವಂ.ಫಾದರ್​ ಎಂ.ಸಿ. ಮಥಾಯಿ, ಪಾಸ್ಟರ್​ ಸೆಲ್ವ ಕುಮಾರ್​, ರೆ.ವಿಜಯ್​ ಹಾರ್ವಿನ್​ ಪಾಲ್ಗೊಳ್ಳಲಿದ್ದಾರೆ ಎಂದರು.

ಅಖಿಲ ಕರ್ನಾಟಕ ಯುನೈಟೆಡ್​ ಕ್ರಿಶ್ಚಿಯನ್​ ಫೋರಮ್​ ಫಾರ್​ ಹ್ಯೂಮನ್​ ರೈಟ್ಸ್​ನ ಉಪಾಧ್ಯಕ್ಷ ಪ್ರಶಾಂತ ಜತ್ತನ್ನ ಮಾತನಾಡಿ, ಐವನ್​ ಡಿಸೋಜಾ ಅವರು ಗ್ರಾಪಂನಿಂದ ಜಿಪಂವರೆಗೆ ತಳಮಟ್ಟದಿಂದ ರಾಜಕೀಯದಲ್ಲಿ ಅಪಾರ ಅನುಭವ ಹೊಂದಿದ್ದು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಪಕ್ಷದ ವಿವಿಧ ಖಾತೆ ನಿರ್ವಹಿಸಿದ್ದಾರೆ. ಹಲವಾರು ನಿರ್ಗತಿಕ, ಅಸ್ವಸ್ಥರ ಸೇವೆ ಮಾಡಿದ್ದು, ಸಿಎಂ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಪಿಆರ್​ಒ ವಂ.ಡೆನಿಸ್​ ಡೆಸಾ, ಕೆಥೊಲಿಕ್​ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ಸಂತೋಷ್​ ಕರ್ನೆಲಿಯೊ, ಕ್ರೈಸ್ತ ಮುಂದಾಳು ವೆರೋನಿಕಾ ಕರ್ನೆಲಿಯೋ ಇದ್ದರು.

ಐವನ್​ ಡಿಸೋಜಾ ಅವರು ಎರಡನೇ ಬಾರಿ ವಿಧಾನ ಪರಿಷತ್​ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದರಿಂದ ಉಡುಪಿ ಜಿಲ್ಲೆಯ ಜನತೆ ಹಾಗೂ ಕ್ರೈಸ್ತ ಸಮುದಾಯ ವಿಶೇಷ ರೀತಿಯಲ್ಲಿ ಹರ್ಷ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕ್ರೈಸ್ತ ಸಮುದಾಯವು ಅವರಿಗೆ ಅಭಿನಂದನೆ ಸಲ್ಲಿಸಲು ಮತ್ತು ಅವರಿಗೆ ಎಲ್ಲ ಯಶಸ್ಸು ಲಭಿಸಲಿ ಎಂದು ಹಾರೈಸಲು ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ವಂ.ಫರ್ಡಿನಾಂಡ್​ ಗೊನ್ಸಾಲ್ವಿಸ್​.ಫಾದರ್​, ಉಡುಪಿ ಧರ್ಮಪ್ರಾಂತ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net