ಮುಗಿಯದ ಕಾಮಗಾರಿಯಿಂದ ಗೋಳು

road work
ಜಲಜೀವನ್ ಯೋಜನೆ ಪೈಪ್‌ಲೈನ್‌ಗಾಗಿ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ ಇಕ್ಕೆಲಗಳನ್ನು ಅಗೆದಿರುವುದು.
Published on

-ಹೇಮನಾಥ್ ಪಡುಬಿದ್ರಿ

ಕಾಪು ತಾಲೂಕಿನಲ್ಲಿ ಕುಡಿಯುವ ನೀರು, ಗ್ಯಾಸ್ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಳು ಮುಂಗಾರು ಆರಂಭವಾದರೂ ಮುಂದುವರಿದ ಪರಿಣಾಮ ಪರೋಕ್ಷ ಆವಾಂತರಗಳಿಗೆ ದಾರಿ ಮಾಡುತ್ತಿದೆ.

ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಜಲಜೀವನ್ ಮಿಷನ್ ಯೋಜನೆ ಪೈಪ್‌ಲೈನ್ ಅಳವಡಿಕೆ, ಗ್ಯಾಸ್ ಪೈಪ್‌ಲೈನ್, ಕಾಪು ಪುರಸಭೆ ಸೇರಿದಂತೆ ಹಲವು ಗ್ರಾಮಗಳಿಗೆ ಕುರ್ಕಾಲು ಹೊಳೆಯಿಂದ ನೀರು ಶುದ್ಧೀಕರಿಸಿ ವಿತರಿಸುವ ಯೋಜನೆಗಾಗಿ ರಾಷ್ಟ್ರೀಯ, ರಾಜ್ಯ ಹೆದ್ದಾರಿ, ಗ್ರಾಮೀಣ ರಸ್ತೆ, ಓಣಿಗಳಲ್ಲಿ ಪೈಪ್‌ಲೈನ್ ಕಾಮಗಾರಿ ಭರದಿಂದ ಸಾಗುತ್ತಿದೆ. ಈಗಾಗಲೇ ಮಳೆ ಆರಂಭವಾಗಿದ್ದು, ಎಲ್ಲೆಂದರಲ್ಲಿ ಅಗೆದ ಪರಿಣಾಮ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ಡಾಂಬರು ಮತ್ತು ಕಾಂಕ್ರೀಟ್ ರಸ್ತೆಗಳು ಕುಸಿಯುವ ಭೀತಿ ಎದುರಾಗಿದೆ. ಪೈಪ್‌ಲೈನ್‌ಗಾಗಿ ರಸ್ತೆಯಂಚನ್ನು ಅಗೆದು ಸಮರ್ಪಕವಾಗಿ ಮುಚ್ಚದ ಪರಿಣಾಮ ಸಂಚಾರಕ್ಕೆ ಸಂಚಕಾರ ತರುತ್ತಿದೆ. ಆದರೆ ರಸ್ತೆಯಂಚಿನಲ್ಲಿ ಮಳೆಗಾಲದಲ್ಲೂ ಕಾಮಗಾರಿ ನಡೆಯುತ್ತಿರುವುದರಿಂದ ಮಳೆಗಾಲದಲ್ಲಿ ಆಗಬಹುದಾದ ಅನಾಹುತಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಕಷ್ಟವಾಗುತ್ತಿದೆ. ಜನರು ಮಾತ್ರ ಈ ಬಗ್ಗೆ ಸ್ಥಳೀಯಾಡಳಿತ ಸಂಸ್ಥೆಗಳನ್ನು ದೂರುವಂತಾಗಿದೆ.

ಕೃತಕ ನೆರೆ ಭೀತಿ

ಕೆಲ ಕಾಂಕ್ರೀಟ್ ರಸ್ತೆಗಳ ಬದಿಗಳು ಕುಸಿದು ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಪ್ರಶ್ನಿಸುವಂತಿದೆ. ಗ್ರಾಮೀಣ ರಸ್ತೆ ಬದಿಗಳಲ್ಲಿ ಪೈಪ್‌ಲೈನ್ ಕಾಮಗಾರಿಯಿಂದ ಇದ್ದ ಚರಂಡಿಗಳು ಮುಚ್ಚಿಹೋಗಿವೆ. ಪ್ರಸ್ತುತ ಮಳೆಗಾಲ ಆರಂಭವಾಗುತ್ತಿದ್ದು, ಚರಂಡಿಗಳ ದುರಸ್ತಿಯಾಗದೆ ಕೃತಕ ನೆರೆಗೆ ಕಾರಣವಾತ್ತಿದೆ. ಎಲ್ಲೆಂದರಲ್ಲಿ ಅಗೆದು ಸಮರ್ಪಕವಾಗಿ ಹೊಂಡಗಳನ್ನು ಮುಚ್ಚದ ಪರಿಣಾಮ ಪಾದಚಾರಿ, ದ್ವಿಚಕ್ರ ವಾಹನ ಸವಾರರು ಹಾಗೂ ಜಾನುವಾರುಗಳ ಜೀವಕ್ಕೆ ಕಂಟಕವಾಗುವಂತಿದೆ. ತಾಲೂಕಿನಲ್ಲಿ ಈಗಾಗಲೇ ಜಲಜೀವನ್ ಯೋಜನೆಯ ಪ್ರಥಮ, ದ್ವಿತೀಯ ಹಂತ ಮುಗಿದು, ತೃತೀಯ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ರಸ್ತೆಯಂಚಿನ ಕಾಮಗಾರಿಗಳಿಂದ ಮಳೆಗಾಲದಲ್ಲಿ ಆಗಬಹುದಾದ ಅನಾಹುತಗಳ ಬಗ್ಗೆ ಸ್ಥಳೀಯಾಡಳಿತವು ಎಚ್ಚರವಹಿಸಬೇಕಾಗಿದೆ.

ಚರಂಡಿ ಹೂಳೆತ್ತಿಲ್ಲ

ಪ್ರತಿ ವರ್ಷ ಮಳೆಗಾಲಕ್ಕೆ ಚರಂಡಿ ಹೂಳೆತ್ತಿ ಪೂರ್ವಸಿದ್ಧತೆ ಕೈಗೊಳ್ಳಬೇಕಾದ ಗ್ರಾಪಂಗಳು ಜೂನ್ ಮಾಸಾರ್ಧ ಮುಗಿದರೂ ಇನ್ನೂ ಚರಂಡಿ ಹೂಳೆತ್ತುವಿಕೆಗೆ ಮುಂದಾಗದಿರುವುದು ವಿಪರ್ಯಾಸವಾಗಿದೆ. ಗ್ರಾಮೀಣ ರಸ್ತೆ ಇಕ್ಕೆಲಗಳಲ್ಲಿ ಇದ್ದ ಚರಂಡಿಗಳು ಮುಚ್ಚಿ ಹೋಗಿದ್ದರೆ, ಹೊಸ ಕಾಂಕ್ರೀಟ್ ರಸ್ತೆಯಂಚಿಗೆ ಮಣ್ಣು ಸುರಿಯದೆ ಅಪಾಯ ಆಹ್ವಾನಿಸುತ್ತಿದೆ. ಕೆಲವೆಡೆ ರಸ್ತೆಯಂಚಿನಲ್ಲಿ ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ತುಂಬಿಸಿಟ್ಟರೂ ತೆರವು ಮಾಡಲು ಕ್ರಮ ಕೈಗೊಂಡಿಲ್ಲ. ಪ್ರತಿ ವರ್ಷ ಮಳೆಗಾಲ ಬಳಿಕ ಜಂಗಲ್ ಕಟ್ಟಿಂಗ್ ಮಾಡಿ ಗಿಡಗಂಟಿಗಳನ್ನು ತೆರವು ಮಾಡದೆ, ರಸ್ತೆಯಂಚು, ಇಲ್ಲವೆ ಚರಂಡಿಯಲ್ಲಿ ತುಂಬಿಸುವುದು ಸಾಮಾನ್ಯವಾಗುತ್ತಿದೆ. ಇದು ಪರೋಕ್ಷವಾಗಿ ಕೃತಕ ನೆರೆಗೆ ಕಾರಣವಾಗುತ್ತಿದೆ.ಬೀದಿ ದೀಪ ಹಾಗೂ ತಂತಿಗಳು ಬಳ್ಳಿ, ಮರದ ಕೊಂಬೆಗಳಿಂದ ಮುಚ್ಚಿ ಹೋದರೂ ಗ್ರಾಪಂ ಆಗಲಿ, ಮೆಸ್ಕಾಂ ಆಗಲಿ ತೆರವು ಮಾಡುವುದನ್ನು ಮರೆತಂತಿದೆ.

ಮುಗಿಯದ ಹೆದ್ದಾರಿ ಸಮಸ್ಯೆ

ಮಳೆ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಪೈಪ್‌ಲೈನ್ ಕಾಮಗಾರಿಗಾಗಿ ರಸ್ತೆಯಂಚಿನಲ್ಲಿ ಅಗೆಯುತ್ತಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ. ಕೆಲವೆಡೆ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ನೀರು ನಿಂತು ಕೃತಕ ನೆರೆ ಉಂಟಾಗಿ ವಾಹನ ಸವಾರರಿಗೆ ಅಪಾಯಕಾರಿಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಕಂಪನಿ ಚರಂಡಿ ದುರಸ್ತಿ ಸಹಿತ ಸರಾಗ ನೀರು ಹರಿದುಹೋಗಲು ಕ್ರಮ ಕೈಗೊಂಡಿದೆ.

ಜಿಲ್ಲೆಯಲ್ಲಿ ಕಾಮಗಾರಿಗಾಗಿ ರಸ್ತೆ ಕಟ್ಟಿಂಗ್ ಮಾಡಿರುವುದು ಗಮನಕ್ಕೆ ಬಂದಿದೆ. ಸಂಬಂಧಪಟ್ಟವರಿಂದ ವರದಿ ಪಡೆಯಲಾಗುವುದು. ಜಲಜೀವನ್, ಗ್ಯಾಸ್ ಪೈಪ್‌ಲೈನ್ ಸೇರಿದಂತೆ ಇತರ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಳಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಸ್ಥಳಿಯಾಡಳಿತದೊಂದಿಗೆ ಸಮನ್ವಯ ಸಾಧಿಸಿ ಪರಿಹರಿಸಲು ಕ್ರಮವಹಿಸಲಾಗುವುದು.-ಕೂರ್ಮಾ ರಾವ್ ಎಂ. ಜಿಲ್ಲಾಧಿಕಾರಿ ಉಡುಪಿ

ಕಾಪು ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಗಾಲದ ಪೂರ್ವಸಿದ್ಧತೆ ಕುರಿತಂತೆ ಸ್ಥಳಿಯಾಡಳಿತ ಸೇರಿದಂತೆ ಇತರ ಅಧಿಕಾರಿಗಳ ಸಭೆ ನಡೆಸಿ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಕಾಮಗಾರಿ ಲೋಪದಿಂದ ಕೃತಕ ನೆರೆ ಉಂಟಾಗದಂತೆ ಕ್ರಮ ವಹಿಸುವಂತೆ ಗುತ್ತಿಗೆದಾರರಿಗೂ ಸೂಚಿಸಲಾಗುವುದು.-ಗುರ್ಮೆ ಸುರೇಶ್ ಶೆಟ್ಟಿ, ಕಾಪು ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net