ಡಾ.ಜಿ.ಪರಮೇಶ್ವರ ಹುಟ್ಟುಹಬ್ಬಕ್ಕೆ ಜನಪರ ಕಾರ್ಯಕ್ರಮ

FotoJet
Published on

ಹೊಳವನಹಳ್ಳಿ ಹೋಬಳಿ ಕೇಂದ್ರದ ಬೃಹತ್​ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ

 ಕೊರಟಗೆರೆ: ಗೃಹಸಚಿವ ಡಾ.ಜಿ.ಪರಮೇಶ್ವರ ಅವರ 74ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಸಾಮಾಜಿಕ, ಜನಪರ ಕಾರ್ಯಕ್ರಮ ಆಯೋಜಿಸುವ ಮೂಲಕ ಆಚರಿಸಿದರು.

ತಾಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಬೃಹತ್​ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್​, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ. ಪರಮೇಶ್ವರ ಅವರು 40 ವರ್ಷಗಳ ರಾಜಕೀಯ ಜೀವನದಲ್ಲಿ ವಿವಿಧ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಹುಟ್ಟಿದ್ದರೂ ವಿದೇಶದಲ್ಲಿ ಪಿಎಚ್​ಡಿ ಪದವಿ ಪಡೆದು ಕ್ರೀಡೆಯಲ್ಲೂ ಸಾಧನೆ ಮಾಡಿದ್ದು, ಅವರ ಹುಟ್ಟುಹಬ್ಬದಂದು ಆರೋಗ್ಯ ಶಿಬಿರ ನಡೆಸುತ್ತಿರುವುದು ಅರ್ಥಪೂರ್ಣ ಎಂದರು.

ಎಸ್ಪಿ ಅಶೋಕ್​ ವೆಂಕಟ್​ ಮಾತನಾಡಿ, ಡಾ.ಜಿ.ಪರಮೇಶ್ವರ ಹೆಸರು ರಾಜ್ಯಾದ್ಯಂತ ಪ್ರಸಿದ್ಧಿಯಾಗಿದೆ. ಅವರ ಜನಪರ ಸೇವೆ, ಶಿಕ್ಷಣದ ಕೊಡುಗೆ ಅಪಾರವಾಗಿದ್ದು, ಅವರ ಸಾಧನೆ ಎಲ್ಲರಿಗೂ ಮಾರ್ಗದರ್ಶಕವಾಗಿದೆ ಎಂದರು.

ನಗರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥನಾರಾಯಣ ಮಾತನಾಡಿ, ಈ ಬೃಹತ್​ ಆರೋಗ್ಯ ತಪಾಸಣಾ ಶಿಬಿರವನ್ನು ಸಿದ್ಧಾರ್ಥ ವೈದ್ಯಕಿಯ ಆಸ್ಪತ್ರೆಯಿಂದ ಆಯೋಜಿಸಿದ್ದು, ತಪಾಸಣೆಗೆ ಬರುವ ಜನರಿಗೆ ಎಲ್ಲ ರೀತಿಯ ತಪಾಸಣೆ ಮಾಡಿ ಅಗತ್ಯ ಬಿದ್ದರೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಹಾಗೂ ನೂರಾರು ಯುವಕರು ಈ ಸಂಧರ್ಭದಲ್ಲಿ ರಕ್ತದಾನ ಮಾಡಿದ್ದಾರೆ ಎಂದರು. 74ಕೆಜಿಯ ಬೃಹತ್​ ಕೇಕ್​ ಕತ್ತರಿಸಲಾಯಿತು. ಮುಖಂಡ ಮಹಾಲಿಂಗಪ್ಪ ನೇತೃತ್ವದಲ್ಲಿ ತಾಲೂಕಿನ ಎಲ್ಲ ಸರ್ಕಾರಿ ಶಾಲೆಯ ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ಸುಮಾರು 12 ಸಾವಿರ ನೋಟ್​ಪುಸ್ತಕ ಮತ್ತು ಪೆನ್​ ವಿತರಿಸಲಾಯಿತು.

ಮುಖಂಡ ಜಗನ್ನಾಥ್​ ಮಾತನಾಡಿ, ಡಾ.ಜಿ.ಪರಮೇಶ್ವರ ಹುಟ್ಟುಹಬ್ಬದ ಪ್ರಯುಕ್ತ ಪಟ್ಟಣಪಂಚಾಯಿತಿ ಮುಂಭಾಗದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಅನ್ನಸಂತರ್ಪಣೆಯನ್ನು ಯುವಕಾಂಗ್ರೆಸ್​ ಜತೆಗೂಡಿ ಆಯೋಜಿಸಲಾಗಿತ್ತು ಎಂದರು.

ಡಾ.ಜಿ.ಪರಮೇಶ್ವರ ಕ್ರೀಡಾ ಮತ್ತು ಸಾಂಸತಿಕ ವೇದಿಕೆಯಿಂದ ಅಧ್ಯಕ್ಷ ಕೆ.ಆರ್​ ಓಬಳರಾಜು ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು. ತಹಸೀಲ್ದಾರ್​ ಮಂಜುನಾಥ್​, ಗ್ರಾಮಾಂತರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಅರಕೆರೆ ಶಂಕರ್​, ಇಒ ಅಪೂರ್ವ, ಸಿಪಿಐ ಅನಿಲ್​, ವಿಶೇಷಾಧಿಕಾರಿ ನಾಗಣ್ಣ, ಸಿಒ ಉಮೇಶ್​, ಕೆಪಿಸಿಸಿ ಸದಸ್ಯ ಪ್ರಸನ್ನಕುಮಾರ್​, ಡಿಸಿಸಿ ಬ್ಯಾಂಕ್​ ನಿರ್ದೇಶಕ ಹನುಮಾನ್​, ವಿಎಸ್​ಎಸ್​ಎನ್​ ಅಧ್ಯಕ್ಷ ವಿನಯ್​ ಕುಮಾರ್​, ಯುವಕಾಂಗ್ರೆಸ್​ ಅಧ್ಯಕ್ಷ ಬೈರೇಶ್​, ಪ.ಪಂ ಸದಸ್ಯ ನಾಗರಾಜು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net