

ಹನೂರು: ಕಳೆದ 3-4 ದಿನಗಳಿಂದ ಆಗಾಗ್ಗೆ ಸುರಿಯುತ್ತಿರುವ ಮಳೆಯ ಪರಿಣಾಮ ತಾಲೂಕಿನ ಲೊಕ್ಕನಹಳ್ಳಿಗೆ ಸಂಪರ್ಕ ಕಲ್ಪಿಸುವ ದೊಡ್ಡಮಾಲಾಪುರ-ಕಂಡಯ್ಯನಪಾಳ್ಯ ಮಾರ್ಗದ ರಸ್ತೆಯ ಗುಂಡಿಗಳಲ್ಲಿ ನೀರು ನಿಲ್ಲುವಂತಾಗಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದ್ದು, ಶೀಘ್ರ ರಸ್ತೆ ಅಭಿವೃದ್ಧಿ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಮಾರ್ಗ ಲೊಕ್ಕನಹಳ್ಳಿ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ಹೆದ್ದಾರಿಯಾಗಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಸುಮಾರು 3 ಕಿಮೀ ಅಂತರವನ್ನು ಹೊಂದಿರುವ ಈ ರಸ್ತೆಯನ್ನು ದಶಕದ ಹಿಂದೆ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಕಳೆದ 3-4 ವರ್ಷದಿಂದ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಬಹುತೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ಮಳೆ ಬಂದ ವೇಳೆ ಹಲವು ದಿನಗಳವರೆಗೆ ನೀರು ನಿಲ್ಲುತ್ತದೆ. ಜಲ್ಲಿಕಲ್ಲುಗಳು ಅಲ್ಲಲ್ಲಿ ಹರಡಿವೆ. ಇದರಿಂದ ಕೆಲವು ಕಡೆಗಳಲ್ಲಿ ರಸ್ತೆ ಬದಿಯಲ್ಲಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಹದಗೆಟ್ಟ ರಸ್ತೆಯಿಂದಾಗಿ ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಸರ್ಕಸ್ ಮಾಡಬೇಕಿದೆ. ಗುಂಡಿಯನ್ನು ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿದೆ. ರಾತ್ರಿ ವೇಳೆಯಲ್ಲಂತೂ ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಜೀವಭಯ ಎದುರಾಗಿದೆ.
ಕಳೆದ 3-4 ದಿನಗಳಿಂದ ಆಗಾಗ್ಗೆ ಸುರಿಯುತ್ತಿರುವ ಮಳೆಗೆ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಕೆರೆಯಂತೆ ಭಾಸವಾಗುತ್ತಿದೆ. ಮತ್ತೊಂದೆಡೆ ಕಂಡಯ್ಯನಪಾಳ್ಯದ ಬಳಿ ರಸ್ತೆಯು ಕೆಸರುಮಯವಾಗಿದೆ. ಇದರಿಂದ ಸಂಚಾರಕ್ಕೆ ತೊಡಕಾಗಿದೆ. ಇತ್ತೀಚೆಗೆ ಲೊಕ್ಕನಹಳ್ಳಿಯಿಂದ 15 ಕಿ.ಮೀ.ವರೆಗೆ ಹದಗೆಟ್ಟಿದ್ದ ರಸ್ತೆಯನ್ನು ಮರು ಡಾಂಬರೀಕರಣ ಮಾಡಲಾಗಿದೆ. ಆದರೆ ಈ ಮಾರ್ಗದ ರಸ್ತೆಯನ್ನು ಹಾಗೆಯೇ ಬಿಡಲಾಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆಯನ್ನು ಅಭಿವೃದ್ಧಿಪಡಿಸುವುದರ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಮಾರ್ಗದ ರಸ್ತೆಯು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವುದರಿಂದ ಹೆಚ್ಚಿನ ವಾಹನಗಳು ಸಂಚರಿಸುತ್ತದೆ. ಆದರೆ ದೊಡ್ಡಮಾಲಾಪುರದಿಂದ ಕಂಡಯ್ಯನಪಾಳ್ಯದವರೆಗೆ ರಸ್ತೆಯ ಅಲ್ಲಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ನೀರು ಹಲವು ದಿನಗಳವರೆಗೆ ನಿಲ್ಲುವಂತಾಗಿದೆ. ಇದರಿಂದ ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಸಂಚರಿಸಲು ತುಂಬ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಂಬಂಧಿಸಿದವರು ಇತ್ತ ಗಮನಹರಿಸಿ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು.
ಜಗದೀಶ್, ಲೊಕ್ಕನಹಳ್ಳಿ ಗ್ರಾಮಸ್ಥ