

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾ.ಪಂ.ವ್ಯಾಪ್ತಿಯ ವಗ್ಗದಲ್ಲಿ ಕಾರಿಂಜ ಕ್ರಾಸ್‌ನಲ್ಲಿ ಸುಸಜ್ಜಿತ ಸಾರ್ವಜನಿಕ ಶೌಚಗೃಹ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಗ್ಗ, ಕಾರಿಂಜ ಕ್ರಾಸ್‌ಪೇಟೆ ಜಂಕ್ಷನ್ ಸ್ಥಳವಾಗಿ ಗುರುತಿಸಲ್ಪಟ್ಟಿದೆ. ಇಲ್ಲಿ ಬ್ಯಾಂಕ್, ಸಹಕಾರಿ ಸಂಘಗಳು, ವಾರದ ಸಂತೆ, ಬಸ್ ತಂಗುದಾಣ, ಆಟೋ ಪಾರ್ಕ್, ಹೋಟೆಲ್‌ಗಳು, ಅಂಗಡಿ, ಮುಂಗಟ್ಟುಗಳು ಹೀಗೆ ಪೇಟೆಯ ವ್ಯವಸ್ಥೆ ಇದ್ದರೂ ಸುಸಜ್ಜಿತ ಸಾರ್ವಜನಿಕ ಶೌಚಗೃಹದ ಕೊರತೆ ಎದ್ದು ಕಾಣುತ್ತಿದೆ.
ಕಾವಳಪಡೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಕಾವಳಪಡೂರು ಮತ್ತು ಕಾಡಬೆಟ್ಟು ಗ್ರಾಮಗಳು ಸೇರಿಕೊಂಡಿದೆ. ಈ ಎರಡು ಗ್ರಾಮಗಳಿಗೆ ವಗ್ಗವೇ ಮುಖ್ಯ ಪೇಟೆಯಾಗಿದೆ. ಗ್ರಾ.ಪಂ.ಕಚೇರಿ ಮತ್ತು ರೇಷನ್ ನೀಡುವ ಸಹಕಾರಿ ಸಂಘಗಳು ಪೇಟೆಯಿಂದ ಸ್ವಲ್ಪ ದೂರದಲ್ಲಿದೆ. ಶಾಲೆ, ಕಾಲೇಜುಗಳೂ ಇದೆ. ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಸಂಪರ್ಕ ರಸ್ತೆಯೂ ವಗ್ಗದಲ್ಲಿರುವುದರಿಂದ ಕಾರಿಂಜ ಕ್ರಾಸ್ ಎಂದೇ ಹೆಸರಾಗಿದೆ. ದೇವಸ್ಯಪಡೂರು, ಮಣಿನಾಲ್ಕೂರು, ಕಕ್ಯಪದವು ಕಡೆ ಸಾಗಬೇಕಾದರೂ ಈ ಸಂಪರ್ಕ ರಸ್ತೆಯನ್ನು ಬಳಸುತ್ತಾರೆ. ರಾಷ್ಟ್ರೀಯ ಹೆದ್ದಾರಿಯಾದುದರಿಂದ ಸ್ಥಳೀಯ ಪ್ರಯಾಣಿಕರು, ವಿದ್ಯಾರ್ಥಿಗಳು ವಾಹನಗಳಿಗಾಗಿ ನಿಲ್ಲುತ್ತಾರೆ. ವಾರದ ಸಂತೆಗೆ ಗ್ರಾಮಸ್ಥರು ಆಗಮಿಸುತ್ತಾರೆ. ಇವರೆಲ್ಲರಿಗೆ ಶೌಚಗೃಹದ ಬಳಕೆಯ ಅಗತ್ಯ ಇರುವುದರಿಂದ ಇಲ್ಲಿ ಸಾರ್ವಜನಿಕ ಶೌಚಗೃಹದ ಅಗತ್ಯವಿದೆ.
ಜಂಕ್ಷನ್‌ನ ಅನತಿ ದೂರದಲ್ಲಿ ಸಾರ್ವಜನಿಕ ಶೌಚಗೃಹವಿದೆ. ಆದರೆ ಸೂಕ್ತ ನಿರ್ವಹಣೆ ಇಲ್ಲದೆ ಅದು ಉಪಯೊಗಿಸುವ ಸ್ಥಿತಿಯಲ್ಲಿಲ್ಲ. ಇಲ್ಲಿನ ಮಾರ್ಕೆಟ್ ಬಳಿಯಿಂದ ಕಚ್ಛಾ ರಸ್ತೆ ಹಾದು ಹೋಗಿದ್ದು, ಇದರ ಬಳಿಯೇ ಇಕ್ಕಟ್ಟಾದ ಸ್ಥಳದಲ್ಲಿ ಪಂಚಾಯಿತಿಯಿಂದ ನಿರ್ಮಾಣವಾದ ಹಳೇ ಶೌಚಗೃಹ ಕಾಣಸಿಗುತ್ತದೆ. ಈ ಶೌಚಗೃಹದ ಕಟ್ಟಡದ ಬಳಿ ಹೋಗಲು ಸರಿಯಾದ ದಾರಿ ಇಲ್ಲ. ವೃದ್ಧರು, ಅಂಗವಿಕಲರು ಹೋಗಲು ಸಾಧ್ಯವಿಲ್ಲ. ಒಂದೇ ಕಟ್ಟಡದಲ್ಲಿ ಗಂಡಸರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೊಠಡಿಗಳಿದ್ದು ಎರಡೂ ಹೀನಾಯ ಸ್ಥಿತಿಯಲ್ಲಿದೆ. ನೀರಿನ ವ್ಯವಸ್ಥೆಯೂ ಸಮರ್ಪಕವಾಗಿಲ್ಲ.
ಇಲ್ಲಿ ಸರ್ಕಾರ ಸುಸಜ್ಜಿತ ಶೌಚಗೃಹ, ವಿಶ್ರಾಂತಿಗೃಹದ ನಿರ್ಮಾಣವಾಗಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.
ವಗ್ಗ, ಕಾರಂಜ ಕ್ರಾಸ್ ಜಂಕ್ಷನ್‌ನಲ್ಲಿ ಹಲವಾರು ವರ್ಷಗಳ ಹಿಂದೆ ಪಂಚಾಯಿತಿಯಿಂದ ನಿರ್ಮಾಣವಾದ ಶೌಚಗೃಹ ದುಸ್ಥಿತಿಯಲ್ಲಿದೆ. ಈಗ ನಿರ್ಮಾಣ ಮಾಡಿದ ಶೌಚಗೃಹದ ಬಳಿ ಸ್ಥಳದ ಕೊರತೆ ಇದ್ದು, ಪ್ರವಾಸಿಗರಿಗೆ ಮತ್ತು ಗ್ರಾಮಸ್ಥರಿಗೆ ಪೂರಕವಾಗಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಶೌಚಗೃಹ ನಿರ್ಮಾಣಕ್ಕೆ ನಿವೇಶನದ ಪರಿಶೀಲನೆಯಲ್ಲಿದ್ದು, ಸೂಕ್ತ ಸ್ಥಳಾವಕಾಶ ದೊರಕಿದಲ್ಲಿ ಸುಸಜ್ಜಿತ ಶೌಚಗೃಹ ನಿರ್ಮಿಸಲಾಗುವುದು. - ರಚನ್ ಕುಮಾರ್, ಪಿಡಿಒ, ಕಾವಳಪಡೂರು ಗ್ರಾಪಂ https://www.vijayavani.net/a-completely-collapsed-house-the-old-womans-silence-inside-the-house https://www.vijayavani.net/kasaragod-city-road-problem