ತುಮಕೂರಿನಲ್ಲಿ ಸ್ವಯಂ ಲಾಕ್‌ಡೌನ್‌ಗೆ ಸಾರ್ವಜನಿಕರ ನಿರ್ಧಾರ ; ವ್ಯಾಪಾರ ವಹಿವಾಟು ಸ್ಥಗಿತಕ್ಕೆ ವರ್ತಕರ ತೀರ್ಮಾನ

DSC_8409
Published on

ತುಮಕೂರು: ನಗರದಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ‘ಸ್ವಯಂ ಲಾಕ್‌ಡೌನ್’ ಜಾರಿಗೆ ಸಾರ್ವಜನಿಕ ವಲಯದಲ್ಲಿ

ಚಿಂತನೆ ನಡೆದಿದೆ.

ಧಾನ್ಯ ವ್ಯಾಪಾರಿಗಳ ಸಂಘವು ವ್ಯಾಪಾರ-ವಹಿವಾಟನ್ನು ಸೀಮಿತ ಅವಧಿಗೆ ನಿಗದಿಗೊಳಿಸಲು ಮುಂದಾಗಿದೆ. ರಾಜ್ಯ ಸರ್ಕಾರ ರೂಪಿಸಿರುವ ಮಾರ್ಗಸೂಚಿಯಂತೆ ಜು.5ರಿಂದ ಪ್ರತಿ ಭಾನುವಾರ ಲಾಕ್‌ಡೌನ್ ಜಾರಿಯಿದ್ದು ಶನಿವಾರ ರಾತ್ರಿ 8ರಿಂದ ಸೋಮವಾರ ಬೆಳಗಿನ ಜಾವ 5ರವರೆಗೆ ನಗರವು ಸಂಪೂರ್ಣ ಸ್ತಬ್ಧವಾಗಿರಲಿದೆ. ಜಿಲ್ಲೆಯಾದ್ಯಂತ ದಿನೇದಿನೆ ಕರೊನಾ ಪ್ರಕರಣ ಹೆಚ್ಚುತ್ತಿವೆ.

ತುಮಕೂರು ನಗರ ಒಂದರಲ್ಲೇ ಶುಕ್ರವಾರ 69 ಹಾಗೂ ಶನಿವಾರ 12 ಪ್ರಕರಣಗಳು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 165ಕ್ಕೇರಿದೆ. ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಬಹುತೇಕ ವಾರ್ಡ್‌ಗಳಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಲಾಕ್‌ಡೌನ್ ಜಾರಿಗೆ ಒಂದೊಂದೇ ಹಂತದ ಸಿದ್ಧತೆ ನಡೆದಿದೆ.

ಮಧ್ಯಾಹ್ನ 2ಕ್ಕೆ ವ್ಯಾಪಾರ ಬಂದ್!: ಧಾನ್ಯ ವ್ಯಾಪಾರಿಗಳ ಸಂಘ (ಜಿಎಂಎ)ವು ವ್ಯಾಪಾರ, ವಹಿವಾಟನ್ನು ಜು.13 ರಿಂದ 25 ರವರೆಗೆ ಮೊದಲ ಹಂತದಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ಸೀಮಿತಗೊಳಿಸಲು ನಿರ್ಧರಿಸಿದೆ. ನಗರದ ಮಂಡಿಪೇಟೆ, ಎಪಿಎಂಸಿ ಯಾರ್ಡ್‌ನಲ್ಲಿ ವರ್ತಕರು ಈ ಅವಧಿಯಲ್ಲಿ ವ್ಯಾಪಾರ ವಹಿವಾಟು ನಡೆಸುವ ಮೂಲಕ ಕರೊನಾ ತಡೆಗಟ್ಟಲು ಸರ್ಕಾರದ ಜತೆ ಕೈಜೋಡಿಸಲು ನಿರ್ಧರಿಸಿದೆ. ಅದೇ ರೀತಿ ಜಿಲ್ಲಾ ಆಟೋಮೊಬೈಲ್ಸ್ ಡೀಲರ್ಸ್ ಕೂಡ ಪ್ರತಿದಿನ ಸಂಜೆ 4ಕ್ಕೆ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದೆ. ಪಾನ್‌ಬ್ರೋಕರ್ಸ್ ಸಂಘದವರು ಸಂಪೂರ್ಣ ವ್ಯಾಪಾರ ಬಂದ್ ಮಾಡಿ ಕರೊನಾ ತಡೆಗಟ್ಟಲು ಜಿಲ್ಲಾಡಳಿತದ ಜತೆ ಕೈಜೋಡಿಸಿದ್ದಾರೆ.

ದೇವರಾಯನದುರ್ಗದಲ್ಲಿ ವಿಹಾರಿಗಳ ಸಾಗರ : ದೇವರಾಯನದುರ್ಗದಲ್ಲಿ ಪ್ರತೀ ಭಾನುವಾರ ವಿಹಾರಿಗಳ ಸಾಗರವೇ ಹರಿದುಬರುತ್ತಿದೆ. ಲಾಕ್‌ಡೌನ್ ನಡುವೆಯೂ ಕಳೆದ ವಾರ ಜನಸಾಗರ ದೇವರಾಯನದುರ್ಗದಲ್ಲಿ ಸೇರಿತ್ತು. ಈ ಬಗ್ಗೆ ಪೊಲೀಸ್ ಇಲಾಖೆ ಸಹ ಮೌನವಹಿಸಿದೆ. ಇದು ಬೆಟ್ಟದಲ್ಲಿ ವಾಸವಿರುವ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದ್ದು ಇನ್ನಾದರೂ ಜಿಲ್ಲಾಡಳಿತ ಇದಕ್ಕೆ ಕಡಿವಾಣ ಹಾಕಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net