ಮೆದುಳು ಜ್ವರ ತಡೆಗೆ ಜನರ ಸಹಕಾರ ಅಗತ್ಯ

29blrp4
ಪಟ್ಟಣದ ಪುರಸಭೆ ವೇಲಾಪುರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಮೆದುಳು ಜ್ವರ ಅಡ್ವೊಕೆಸಿ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು.
Published on

ಬೇಲೂರು: ಮೆದುಳು ಜ್ವರವನ್ನು ತಡೆ ಮತ್ತು ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಮುಖ್ಯ ಎಂದು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಹೇಳಿದರು.

ಪಟ್ಟಣದ ಪುರಸಭೆ ವೇಲಾಪುರಿ ಸಭಾಂಗಣದಲ್ಲಿ ಕೆಲ ದಿನಗಳ ಹಿಂದೆ ಆರೋಗ್ಯ ಇಲಾಖೆಯಿಂದ ಇತ್ತೀಚೆಗೆ ಆಯೋಜಿಸಿದ್ದ ಮೆದುಳು ಜ್ವರ ಅಡ್ವೊಕೆಸಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮೆದುಳು ಜ್ವರವು ಮಕ್ಕಳಿಗೆ ಮಾರಣಾಂತಿಕವಾಗಿದ್ದು, ಪಾಲಕರು ಈ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕಿದೆ. ಜತೆಗೆ ಸೊಳ್ಳೆಗಳು ಕಚ್ಚದಂತೆ ಎಚ್ಚರ ವಹಿಸಿ ಸೊಳ್ಳೆ ಪರದೆ ಬಳಸಬೇಕು. ಅಲ್ಲದೆ ಆರೋಗ್ಯ ಇಲಾಖೆಯವರೊಂದಿಗೆ ಜನ ಸಮುದಾಯ ಸಹಕಾರ ನೀಡಿದರೆ ಈ ಕಾಯಿಲೆ ತಡೆಗಟ್ಟಬಹುದು ಎಂದರು.

ಜಿಲ್ಲಾ ರೋಗವಾಗಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನಾಗಪ್ಪ ಮಾತನಾಡಿ, ಮೆದುಳು ಜ್ವರವು ವೈರಾಣುವಿನಿಂದ ಹರಡುವ ರೋಗ. ಈ ರೋಗವು ಸೋಂಕಿರುವ ಹಂದಿ, ಬೆಳ್ಳಕ್ಕಿಗಳಿಂದ ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳು ಕಚ್ಚುವ ಮೂಲಕ ಮನುಷ್ಯನಿಗೆ ಹರಡುತ್ತದೆ. ಈ ರೋಗಕ್ಕೆ ಹೆಚ್ಚಾಗಿ ಮಕ್ಕಳು ತುತ್ತಾಗುತ್ತಾರೆ. ರೋಗ ತಗುಲಿದ ಶೇ.30ರಿಂದ 50ರಷ್ಟು ಮಕ್ಕಳು ಮರಣ ಹೊಂದುವ ಸಂಭವವಿದೆ. ಬದುಕುಳಿದವರಲ್ಲಿ ಅನೇಕರಿಗೆ ನರ ದೌರ್ಬಲ್ಯ, ಬುದ್ಧಿ ಮಾಂದ್ಯತೆ ಉಂಟಾಗುತ್ತವೆ ಎಂದರು.

ಕೀಟ ಶಾಸ್ತ್ರಜ್ಞ ರಾಜೇಶ್ ಕುಲಕರ್ಣಿ ಮಾತನಾಡಿ, ಮೆದುಳು ಜ್ವರದ ಲಕ್ಷಣಗಳಾದ ಜ್ವರ, ತಲೆ ನೋವು, ಕತ್ತಿನ ಬಿಗಿತ, ತಲೆ ಸುತ್ತುವಿಕೆ, ಮೈ ನಡುಕ, ಎಚ್ಚರ ತಪ್ಪುವುದು, ಕಾಯಿಲೆ ಉಲ್ಬಣ ಗೊಂಡಾಗ ಮೆದುಳು ಊತಗೊಂಡು ಸಾವು ಸಂಭವಿಸಬಹುದು. ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸುವುದು ಅತ್ಯವಶ್ಯಕ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ಉಷಾ, ಮುಖ್ಯಾಧಿಕಾರಿ ಸುಜಯ್ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ, ಡಾ.ಚಂದ್ರಮೌಳಿ, ಜಿಲ್ಲಾ ಮೇಲ್ವಿಚಾರಕ ರಾಮಪ್ಪ ಕೋಳಿ, ಜನಾರ್ಧನ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಉಷಾ, ಹಿರಿಯ ಆರೋಗ್ಯ ನೀಕ್ಷಣಾಧಿಕಾರಿ ದಯಾನಂದ್, ಪಶು ಇಲಾಖೆ ವೈದ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net