ಡೆಂಘೆ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ

7 ckm 1
ಚಿಕ್ಕಮಗಳೂರಿನ ನೆಹರೂ ನಗರದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಸೀಮಾ ನೇತೃತ್ವದಲ್ಲಿ ಲಾರ್ವಾ ಸರ್ವೇ ನಡೆಸಲಾಯಿತು. ಬೇಬಿ, ಮಂಜುನಾಥ್ ಮತ್ತಿತರರಿದ್ದರು
Published on

ಚಿಕ್ಕಮಗಳೂರು: ಡೆಂಘೆ ಜ್ವರ ನಿಯಂತ್ರಿಸುವಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ನಾಗರೀಕರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ. ಸೀಮಾ ತಿಳಿಸಿದರು.

ನಗರದ ನೆಹರೂ ನಗರದಲ್ಲಿ ಶುಕ್ರವಾರ ಲಾರ್ವಾ ಸರ್ವೇ ನಡೆಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಡೆಂಘೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಲಾರ್ವಾ ಸರ್ವೆಯನ್ನು ನಗರದ ಪ್ರತಿ ವಾರ್ಡ್ಗಳಲ್ಲಿಯೂ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿ ಮನೆಗೆ ಭೇಟಿನೀಡಿ ಡೆಂಘೆ ಜ್ವರ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ನೀರು ಸಂಗ್ರಹಗಾರದಲ್ಲಿ ಡೆಂಘೆ ಹರಡುವ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಜ್ವರ ಕಾಣಿಸಿಕೊಂಡ ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ಭೇಟಿನೀಡಿ ರಕ್ತ ಪರೀಕ್ಷೆ ಮಾಡಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪ ಕೇಂದ್ರಗಳ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು, ಎಎನ್‌ಎಂ, ಆರೋಗ್ಯ ನಿರೀಕ್ಷಕರು, ವೈದ್ಯಾಧಿಕಾರಿಗಳನ್ನೊಳಗೊಂಡ ತಂಡ ಗ್ರಾಮೀಣ ಪ್ರದೇಶದ ಎಲ್ಲ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುತ್ತಿವೆ. ನಾಗರೀಕರು ಮನೆ ಒಳಗೆ ಸೊಳ್ಳೆಗಳು ಬರದಂತೆ ಸೊಳ್ಳೆಬತ್ತಿ ಹಚ್ಚಬೇಕು. ಕಿಟಕಿಗಳಿಗೆ ಸೊಳ್ಳೆ ಮೆಶ್ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಡೆಂಘೆ ನಿಯಂತ್ರಣಕ್ಕೆ ಸಂಬAಧಿಸಿದAತೆ ನಗರಸಭೆಯೊಂದಿಗೆ ಚರ್ಚಿಸಲಾಗಿದ್ದು, ಫಾಗಿಂಗ್, ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಲಾಗುತ್ತಿದೆ. ಆದರೆ ಸಾರ್ವಜನಿಕರು ಕಸವನ್ನು, ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕಬಾರದು. ಇದರಿಂದ ನೀರು ಸಂಗ್ರಹವಾಗಿ ಸೊಳ್ಳೆ ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದರು.
ಮೊದಲಿಗೆ ಜ್ವರ ಬರುವುದು, ತಲೆನೋವು, ಮೈಕೈ ನೋವು, ಕಣ್ಣಿನ ಗುಡ್ಡೆ ನೋವು ಇವುಗಳು ಡೆಂಘೆ ರೋಗದ ಲಕ್ಷಣಗಳಾಗಿದ್ದು, ರಕ್ತ ಪರೀಕ್ಷೆಯಿಂದ ಮಾತ್ರ ಇದನ್ನು ಪತ್ತೆಹಚ್ಚಬಹುದಾಗಿದೆ ಎಂದು ತಿಳಿಸಿದರು.
ತಿಂಗಳ ಮೊದಲ ಹಾಗೂ ಮೂರನೇ ಶುಕ್ರವಾರ ಪ್ಯಾರಮೆಡಿಕಲ್ ವಿದ್ಯಾರ್ಥಿಗಳು ನಗರದಲ್ಲಿ ಲಾರ್ವಾ ಸರ್ವೆ ನಡೆಸುತ್ತಿದ್ದು, ಎರಡು ಮತ್ತು ನಾಲ್ಕನೇ ಶುಕ್ರವಾರ ಆರೋಗ್ಯ ಇಲಾಖೆ ಸಿಬ್ಬಂದಿ, ಎಲ್ಲ ಆಶಾ ಕಾರ್ಯಕರ್ತೆಯರು, ನರ್ಸ್ಗಳು, ಎಎನ್‌ಎಂ, ಪಿಎಚ್‌ಸಿ, ಎಚ್‌ಐಓಗಳು ಲಾರ್ವಾ ಸರ್ವೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಲಾರ್ವಾ ಸಮೀಕ್ಷೆ ವೇಳೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬೇಬಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್, ಕಿರಿಯ ಆರೋಗ್ಯ ಸಹಾಯಕ ಅಧಿಕಾರಿ ಲಕ್ಷ್ಮೀಬಾಯಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net