ಸ್ವಚ್ಛತೆಗೆ ಜನರ ಸಹಕಾರ ಅವಶ್ಯ

12 CRP-2A
ಚನ್ನರಾಯಪಟ್ಟಣ ಪುರಸಭಾ ವತಿಯಿಂದ ಪಟ್ಟಣದ ಒಳಚರಂಡಿ ಸ್ವಚ್ಛತಾ ವ್ಯವಸ್ಥೆಗಾಗಿ ಖರೀದಿಸಲಾದ ಜೆಸಿಬಿ ಯಂತ್ರ ಸೇವೆಗೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು ಸಿ.ಎನ್.ಮೋಹನ್, ಬನಶಂಕರಿ ರಘು, ಕೆ.ಎನ್. ಹೇಮಂತ್, ಕಾವ್ಯಶ್ರೀ ಇತರರು ಇದ್ದರು.
Published on

ಚನ್ನರಾಯಪಟ್ಟಣ: ಪಟ್ಟಣದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಸಾರ್ವಜನಿಕರು ಸಹ ಪುರಸಭೆಯೊಂದಿಗೆ ಕೈಜೋಡಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಮನವಿ ಮಾಡಿದರು.

ಪಟ್ಟಣದ ಮೂರನೇ ವಾರ್ಡ್‌ನಲ್ಲಿ ಪುರಸಭೆಯಿಂದ ಪಟ್ಟಣದ ಒಳಚರಂಡಿ ಸ್ವಚ್ಛತಾ ವ್ಯವಸ್ಥೆಗಾಗಿ 2024-25 ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಖರೀದಿಸಿರುವ 28 ಲಕ್ಷ ರೂ. ವೆಚ್ಚದ ಜೆಸಿಬಿ ಯಂತ್ರ ಸೇವೆಗೆ ಚಾಲನೆ ನೀಡಿ ಮಾತನಾಡಿದರು.

ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ತ್ಯಾಜ್ಯ ಸಮಸ್ಯೆ ಹೆಚ್ಚುತ್ತಲೇ ಇದೆ. ಇದನ್ನು ಉತ್ತಮ ರೀತಿಯಲ್ಲಿ ನಿಭಾಯಿಸುವ ಮಹತ್ವದ ಹೊಣೆ ಸ್ಥಳೀಯ ಸಂಸ್ಥೆಗಳದು. ಪಟ್ಟಣದಲ್ಲಿ ಹಳೆಯದಾದ ಒಳಚರಂಡಿ ವ್ಯವಸ್ಥೆ ಇದ್ದು ಮಳೆಗಾಲ ಸಮೀಪಿಸುತಿರುವುದರಿಂದ ಸ್ವಚ್ಛತೆಗೆ ಆದ್ಯತೆ ನೀಡಲು ಜೆಸಿಬಿ ಯಂತ್ರ ಖರೀದಿಸಲಾಗಿದೆ. ಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು ಜೆಸಿಬಿ ಯಂತ್ರ ಅನುಕೂಲವಾಗಿದೆ. ಇದರ ಸಹಕಾರದಿಂದ ಪಟ್ಟಣದಾದ್ಯಂತ ಮಳೆ ನೀರು ಹೊರಗೆ ಹೋಗುವ ವ್ಯವಸ್ಥೆ ಮಾಡಲಾಗುವುದು. ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಪಟ್ಟಣದಲ್ಲಿ ಜನರು ಆರೋಗ್ಯದಿಂದ ಬದುಕು ಸ್ವಚ್ಛತೆ ನಿರ್ವಹಣೆ ಅವಶ್ಯ. ಕೇವಲ ಅಧಿಕಾರಿ ಹಾಗೂ ಪೌರ ಕಾರ್ಮಿಕರು ಶ್ರಮ ವಹಿಸಿದರೆ ವಾತಾವರಣವನ್ನು ಸ್ವಚ್ಛವಾಗಿರಿಸಲು ಸಾಧ್ಯವಿಲ್ಲ. ಸ್ವಚ್ಛತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ. ಆರೋಗ್ಯವಾಗಿರಬೇಕಾದರೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸೊಳ್ಳೆ ಹಾವಳಿ ತಡೆಯಲು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮಳೆಯ ನೀರು ನಿಲ್ಲದ ಹಾಗೆ ಹಾಗೂ ಚರಂಡಿಯಲ್ಲಿ ಕಸ ಎಸೆಯದ ಹಾಗೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪುರಸಭಾ ಅಧಿಕಾರಿಗಳು ಪಟ್ಟಣದ ಸ್ವಚ್ಛತೆಯ ನಿರ್ವಹಣೆಗೆ ಇರುವ ಎಲ್ಲ ವಾಹನಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಕಸದ ವಾಹನಗಳು ಪ್ರತಿ ಬೀದಿಯಲ್ಲಿ ಸಂಚರಿಸಿ ಕಸ ಸಂಗ್ರಹಿಸಬೇಕು. ಮೂಲಸೌಕರ್ಯ ಕಲ್ಪಿಸಲು ತಾವು ಸದಾ ಬದ್ಧರಾಗಿರುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಸಿ.ಎನ್. ಮೋಹನ್ ಮಾಜಿ ಅಧ್ಯಕ್ಷೆ ಬನಶಂಕರಿ ರಘು, ಮುಖ್ಯಾಧಿಕಾರಿ ಕೆ.ಎನ್.ಹೇಮಂತ್, ಸದಸ್ಯರ ರಾಮು, ಪರಿಸರ ಇಂಜಿನಿಯರ್ ಕಾವ್ಯಶ್ರೀ, ಗಿರೀಶ್, ಮುಖಂಡರಾದ ಮೊರಾರ್ಜಿ ಮಂಜಣ್ಣ, ಕೃಷ್ಣಣ್ಣ, ನಾಗೇಂದ್ರ, ರಮೇಶ್, ಚಂದ್ರೇಗೌಡ, ಶಾಮಿಯಾನ ರಘು ಚಂದ್ರಮೌಳೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಬಾಲಕೃಷ್ಣ ಭಟ್ , ಪುರಸಭಾ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net