ಸಾರ್ವಜನಿಕ ಕ್ಲಬ್ ಮೈದಾನ ಉಳಿವಿಗಾಗಿ ಹೋರಾಟ

Published on

ದೇವದುರ್ಗ: ಪಟ್ಟಣದ ಐತಿಹಾಸಿಕ ಸಾರ್ವಜನಿಕ ಕ್ಲಬ್ ಮೈದಾನದ ಅಭಿವೃದ್ಧಿಯನ್ನು ಪುರಸಭೆ ಹಾಗೂ ಜನಪ್ರತಿನಿಧಿಗಳು ಮರೆತಿದ್ದಾರೆ. ಮೈದಾನ ಅಭಿವೃದ್ಧಿ ಹಾಗೂ ಉಳಿವಿಗೆ ನಿರಂತರ ಹೋರಾಟ ನಡೆಸಲಾಗುವುದು ಎಂದು ಸಾರ್ವಜನಿಕ ಕ್ಲಬ್ ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಜಿ.ಬಸವರಾಜ ನಾಯಕ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಪಟ್ಟಣದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಕ್ಲಬ್ ಮೈದಾನ ಐತಿಹಾಸಿಕವಾಗಿದ್ದು, ಸಾವಿರಾರು ಕಾರ್ಯಕ್ರಮ ಮಾಡಿದ ಹೆಗ್ಗಳಿಕೆ ಹೊಂದಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ, ದೇವೇಗೌಡರು ಆದಿಯಾಗಿ ಹಲವು ಮಹಾನ್ ವ್ಯಕ್ತಿಗಳು ಭಾಗವಹಿಸಿ ಸಮಾವೇಶ ಮಾಡಿದ್ದಾರೆ. ಆದರೆ, ಪುರಸಭೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮೈದಾನ ಸಂಪೂರ್ಣ ಹಾಳಾಗಿದೆ. ಇದರಿಂದ ಜನರಿಗೆ ತುಂಬ ಸಮಸ್ಯೆಯಾಗುತ್ತಿದೆ.

ಕೂಡಲೇ ಪುರಸಭೆ ಮೈದಾನ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟು, ಮೈದಾನ ಅಳತೆಮಾಡಿ ಹದ್ದುಬಸ್ತು ಮಾಡಬೇಕು. ಮೈದಾನ ಸ್ವಚ್ಛತೆ ಸೇರಿ ನಿರ್ವಹಣೆ ಮಾಡುವ ಸಿಬ್ಬಂದಿಗೆ ಉದ್ಯೋಗ ಭದ್ರತೆ, ವಸತಿ ಯೋಜನೆಯಡಿ ಮನೆ ನೀಡಬೇಕು. ನಿರ್ಲಕ್ಷ್ಯ ವಹಿಸಿದರೆ ಪುರಸಭೆ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಮುಖಂಡರಾದ ಶಿವಪ್ಪ ಬಲ್ಲಿದವ್, ಸಚಿನ್ ದೋಟಿಹಾಳ, ತಾಯಪ್ಪ ಗೋಸಲ್, ಹಮೀದ್ ನಾಯ್ಕ, ಶಿವರಾಜ ರುದ್ರಾಕ್ಷಿ, ಶಂಶುದ್ದೀನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net