ನೀರು, ಸ್ವಚ್ಛತೆ ಕುರಿತು ಜನಜಾಗೃತಿ ಸಪ್ತಾಹ

DC DIVYAPRABHU
Published on

ಚಿತ್ರದುರ್ಗ: ಶುದ್ಧ ಕುಡಿಯುವ ನೀರು, ವೈಯಕ್ತಿಕ ಸ್ವಚ್ಛತೆ ಹಾಗೂ ನೈರ್ಮಲ್ಯ ಪಾಲನೆ ಕುರಿತು ಅರಿವು ಮೂಡಿಸಲು ಜಿಲ್ಲಾದ್ಯಂತ ಆ.14ರಿಂದ 20ರವರೆಗೂ ಜನಜಾಗೃತಿ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಈಚೆಗೆ ಕಲುಷಿತ ನೀರಿನಿಂದ ಕವಾಡಿಗರಹಟ್ಟಿಯಲ್ಲಿ ಸಂಭವಿಸಿದ ಅಹಿತಕರ ಘಟನೆ ಜಿಲ್ಲೆಯಲ್ಲಿ ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅರಿವು ಮೂಡಿಸುವ, ಆತಂಕ ನಿವಾರಿಸುವ ಉದ್ದೇಶದಿಂದ ಆರೋಗ್ಯ ಶಿಕ್ಷಣ ನೀಡಲು ಜಿಲ್ಲಾಡಳಿತ, ಜಿಪಂ ವತಿಯಿಂದ ಅಭಿಯಾನ ಆಯೋಜಿಸಲಾಗಿದೆ ಎಂದರು.

14ರ ಬೆಳಗ್ಗೆ 10ಕ್ಕೆ ಓಬವ್ವ ವೃತ್ತದಿಂದ ಚಾಲನೆ ದೊರೆಯಲಿದೆ. ಅಭಿಯಾನ ನಗರದ 35 ವಾರ್ಡ್‌ಗಳಲ್ಲೂ ಏಕಕಾಲಕ್ಕೆ ಜರುಗಲಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಸ್ವ-ಸಹಾಯ ಗುಂಪುಗಳ ಸದಸ್ಯರು, ಅಂಗನವಾಡಿ ಸಹಾಯಕರು ಸೇರಿ ಸಾವಿರಾರು ಜನ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಶುದ್ಧ ನೀರು, ನೈರ್ಮಲ್ಯದ ಕುರಿತು ಸ್ತಬ್ಧ ಚಿತ್ರಗಳು, ವಿವಿಧ ಕಲಾತಂಡಗಳಿಂದ ಸಂದೇಶ, ಬಿತ್ತಿ ಪತ್ರಗಳ ಪ್ರದರ್ಶನ, ಘೋಷಣೆಗಳು, ಎಲ್‌ಇಡಿ ವಾಹನದ ಮೂಲಕ ಅರಿವು ಮೂಡಿಸುವ ವಿಡಿಯೋ ಪ್ರದರ್ಶನ, ಕರಪತ್ರಗಳ ಹಂಚಿಕೆ, ಬೀದಿ ನಾಟಕ ಆಯೋಜನೆ, ಪ್ರಮುಖ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಜನರ ಗಮನ ಸೆಳೆದು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಕೋಟೆನಗರಿಯಷ್ಟೇ ಅಲ್ಲದೆ, ಜಿಲ್ಲೆಯ ಇನ್ನುಳಿದ ನಗರ, ಪಟ್ಟಣ, ಪ್ರತಿ ಗ್ರಾಮಗಳಲ್ಲೂ ಸಂಚರಿಸಿ ಮನೆಯ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳುವುದು, ನೀರನ್ನು ಕಾಯಿಸಿ ಆರಿಸಿ ಕುಡಿಯುವುದು, ಆಹಾರ ಸೇವನೆಗೂ ಮುನ್ನ ಕೈತೊಳೆಯುವುದು, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಇದಕ್ಕೆ ಜನರ ಸಹಕಾರ ಕೂಡ ಅಗತ್ಯ ಎಂದು ಮನವಿ ಮಾಡಿದರು.

ಈ ಸಂಬಂಧ ಜಿಲ್ಲಾದ್ಯಂತ ವೈವಿಧ್ಯಮಯ ಚಟುವಟಿಕೆ ಹಮ್ಮಿಕೊಳ್ಳಲಾಗಿದ್ದು, ಶಾಲಾ ಮಕ್ಕಳಿಂದ ಪ್ರಭಾತ ಫೇರಿ, ಕಾಲ್ನಡಿಗೆ ಜಾಥಾ, ಕಸ ವಿಲೇವಾರಿ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ, ಗ್ರಾಪಂಗಳಲ್ಲಿ ವಿಶೇಷ ಗ್ರಾಮ ಸಭೆ ಆಯೋಜನೆ, ಸ್ತ್ರೀಶಕ್ತಿ ಮತ್ತು ಮಹಿಳಾ ಸ್ವ-ಸಹಾಯ ಗುಂಪುಗಳ ಮೂಲಕ ಮಹಿಳೆಯರಲ್ಲಿ ಜಾಗೃತಿ, ಆರೋಗ್ಯ ಪ್ರಾತ್ಯಕ್ಷಿಕೆ, ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ವೇಳೆ ತಿಳಿವಳಿಕೆ, ಸಂಜೆ ಪಂಜಿನ ಮೆರವಣಿಗೆ ಆಯೋಜಿಸಿದ್ದು, ಸಪ್ತಾಹ ಯಶಸ್ವಿಗೊಳಿಸಲು ಶ್ರಮಿಸಿ ಎಂದು ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಡಿಎಚ್‌ಒ ಡಾ.ಆರ್.ರಂಗನಾಥ್, ಡಿಡಿಪಿಐ ರವಿಶಂಕರರೆಡ್ಡಿ, ಬಿಇಒ ನಾಗಭೂಷಣ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ನಗರಸಭೆ ಪೌರಾಯುಕ್ತ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net