

ಕಿಕ್ಕೇರಿ: ಮದ್ಯಪಾನ, ದುಶ್ಚಟದಿಂದ ಮುಕ್ತವಾದರೆ ರಾಷ್ಟ್ರ ಸುಭದ್ರವಾಗಲಿದೆ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಎಚ್. ಶ್ರೀನಿವಾಸ್ ತಿಳಿಸಿದರು.
ಹೋಬಳಿಯ ಲಕ್ಷ್ಮೀಪುರ ಗ್ರಾಮದ ಎಸ್‌ಆರ್‌ಟಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ, ಪ್ರಗತಿಬಂಧು, ಸ್ವಸಹಾಯ ಸಂಘಗಳ ಒಕ್ಕೂಟ ಶುಕ್ರವಾರ ಗಾಂಧೀಜಿಯವರ 156ನೇ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಗಾಂಧಿ ಸ್ಮರಣೆ, ಜನಜಾಗೃತಿ ಜಾಥಾ ಹಾಗೂ ಸಮಾವೇಶದಲ್ಲಿ ಮಾತನಾಡಿದರು.
ಶ್ರೀ ಕ್ಷೇತ್ರ ಸಮಾಜಮುಖಿಯಾಗಿ ಶೈಕ್ಷಣಿಕ, ಆಧ್ಯಾತ್ಮ, ಧಾರ್ಮಿಕ, ಸಮಾಜದ ಪಿಡುಗಿನ ವಿರುದ್ಧ ಹೋರಾಡುತ್ತಿದೆ. ಸಂಸ್ಥೆ ಜತೆ ಎಲ್ಲರೂ ಕೈಜೋಡಿಸಿದಾಗ ಗಾಂಧೀಜಿ ಪರಿಕಲ್ಪನೆಯಂತೆ ವ್ಯಸನಮುಕ್ತ ಭಾರತ ನಿರ್ಮಾಣ ಸಾಧ್ಯ ಆಗಲಿದೆ. ಕುಡಿತ ನೂರಾರು ಕೆಟ್ಟ ಕೆಲಸ ಮಾಡಿಸಲಿದೆ. ಕುಡಿತ ಚಟವಾದರೆ ಬದುಕು ಛಿದ್ರವಾಗಿ ಸಂಸಾರ, ಆರೋಗ್ಯ, ಮಾರ್ಯದೆ, ಸಮಾಜ ಎಲ್ಲವೂ ಹಾಳಾಗಲಿದೆ ಎಂದರು.
ಶಾಸಕ ಎಚ್.ಟಿ. ಮಂಜು ಮಾತನಾಡಿ, ಸಮಾಜ, ಆರೋಗ್ಯಕ್ಕೆ ಮಾರಕವಾದ ಈ ಪೆಡಂಭೂತ ಬಿಡಿಸಲು ಸಂಸ್ಥೆ ಜತೆ ತಮ್ಮ ಸಹಕಾರ ಸದಾ ಇದೆ. ತಾಯಂದಿರು ಮನಸ್ಸು ಮಾಡಿದರೆ ಖಂಡಿತ ಯುವಕರು, ಹಿರಿಯರು ಮದ್ಯ ಮುಕ್ತರಾಗಿ ಸಮೃದ್ಧಿಯ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಆರ್‌ಟಿಒ ಮಲ್ಲಿಕಾರ್ಜುನ ಮಾತನಾಡಿ, ಹುಟ್ಟು ಸಾವಿನ ನಡುವೆ ಮಾಡುವ ಪುಣ್ಯದ ಕೆಲಸ ಮಾತ್ರ ಉಳಿಯಲಿದೆ. ವೀರೇಂದ್ರ ಹೆಗ್ಗಡೆ ಅವರ ಪರಿಕಲ್ಪನೆಯಿಂದ 1982ರಲ್ಲಿ ಆರಂಭವಾದ ಯೋಜನೆಯಿಂದ ಲಕ್ಷಾಂತರ ಕುಟುಂಬಗಳು ಬದುಕುಳಿಯುವಂತಾಗಿದೆ. ಮದ್ಯಪಾನದಿಂದ ಮರಣದಷ್ಟೇ ಅಪಘಾತಗಳು ಹೆಚ್ಚುತ್ತಿವೆ. ನಂಬಿದ ಕುಟುಂಬ ಅನಾಥ ಮಾಡದೆ ತಮ್ಮ ಆರೋಗ್ಯಕರ ಬದುಕು, ಉತ್ತಮ ಸಮಾಜ ಸೃಷ್ಟಿಗೆ ನೆರವಾಗಿ ಎಂದು ವಿನಂತಿಸಿದರು.
ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಮಾತನಾಡಿ, ಮಕ್ಕಳ ಕೈಯಲ್ಲಿರುವ ಮೊಬೈಲ್ ಮಾದಕ ವಸ್ತುಗಳ ಜಾಲತಾಣವಾಗಿದೆ. ಸರ್ಕಾರದಿಂದ ಅಬಕಾರಿ ನೀತಿ ಬದಲಾವಣೆಯಾದರೆ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲು ಸಾಧ್ಯ. ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಉಳಿಯಲು ತಾಯಂದಿರ ಪಾತ್ರ ಮುಖ್ಯ ಎಂದು ಎಚ್ಚರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಮದ್ಯಪಾನ, ದುಶ್ವಟಗಳಿಂದ ಯುವ ಸಂಪತ್ತು, ಭವಿಷ್ಯ ಹಾಳಾಗುತ್ತಿದೆ. ಅಮಲಿನ ವ್ಯಸನಿಗಳಿಂದ ನೂರಾರು ಅಕ್ರಮ ಚಟುವಟಿಕೆ ನಡೆಯುತ್ತಿದೆ. ಸಂಸ್ಥೆ ಸರ್ಕಾರ, ರಕ್ಷಣಾ ಇಲಾಖೆಗೆ ಬೆನ್ನೆಲುಬಿನಂತಿದೆ ಎಂದು ಪ್ರಶಂಸಿದರು.
ಮಾಜಿ ಸಚಿವ ಕೆ.ಸಿ. ನಾರಾಯಣಗೌಡ, ಕೆಪಿಸಿಸಿ ಸದಸ್ಯ ಸುರೇಶ್, ಸಂಸ್ಥೆ ಜಿಲ್ಲಾ ನಿರ್ದೇಶಕ ಎ. ಯೋಗೇಶ್ ಮಾತನಾಡಿದರು. ಕಿಕ್ಕೇರಿ ಗ್ರಾಪಂ ಅಧ್ಯಕ್ಷ ಕೆ.ಬಿ. ಚಂದ್ರಶೇಖರ್, ಲಕ್ಷ್ಮೀಪುರ ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್. ಪ್ರಭಾಕರ್, ಶೀಳನೆರೆ ಅಂಬರೀಷ್, ಜಿಲ್ಲಾ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಕೆ.ಆರ್. ರಾಜೇಶ್, ಸದಸ್ಯ ಮೊಟ್ಟೆ ಮಂಜು, ಸುನೀತಾ, ಸಂಸ್ಥೆ ಯೋಜನಾಧಿಕಾರಿ ಕೆ.ಪ್ರಸಾದ್, ಕೆ.ಆರ್.ಪೇಟೆ ತಿಲಕ್‌ರಾಜು, ಚನ್ನರಾಯಪಟ್ಟಣ ಎಂ. ಗಣೇಶ್, ಕೆ.ಆರ್. ಪೇಟೆ ಪುರಸಭೆ ಅಧ್ಯಕ್ಷೆ ಪಂಕಜಾ, ಕುರುಹಿನಶೆಟ್ಟಿ ಸಮಾಜ ಅಧ್ಯಕ್ಷ ಸೂರ್ಯನಾರಾಯಣ, ನಾರಾಯಣಸ್ವಾಮಿ, ಅಕ್ಕಿಹೆಬ್ಬಾಳು ರಘು ಇದ್ದರು.