

ಹುಬ್ಬಳ್ಳಿ: ವಿಶ್ವ ಆರೋಗ್ಯ ದಿನ ನಿಮಿತ್ತ ಇಲ್ಲಿಯ ಕರ್ನಾಟಕ ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸೋಮವಾರ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಬೆಳಗ್ಗೆ 9 ಗಂಟೆಗೆ ಕೆಎಂಸಿಆರ್‌ಐ ಸಿಬ್ಬಂದಿ, ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳಿಂದ ಸಾರ್ವಜನಿಕ ಜಾಗೃತಿ ಜಾಥಾ ಜರುಗಿತು. ವಾಕರಸಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಅವರು ಜಾಥಾಕ್ಕೆ ಚಾಲನೆ ನೀಡಿದರು.
ಕಿರು ನಾಟಕ ಪ್ರದರ್ಶನ, ಸಮುದಾಯ ಆರೋಗ್ಯ ವಿಭಾಗದಲ್ಲಿ ರಸ ಪ್ರಶ್ನೆ ಸ್ಪರ್ಧೆ, ವಿಚರ ಸಂಕಿರಣ, ಡಾ. ಇರ್ಷಾದ್‌ಖಾನ್ ಅವರಿಂದ ಉಪನ್ಯಾಸ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಜರುಗಿದವು.
ನಿರ್ದೇಶಕ ಡಾ. ಕೆ.ಎಫ್. ಕಮ್ಮಾರ್, ವೈದ್ಯಕೀಯ ಅಧೀಕ್ಷಕರಾದ ಡಾ. ಈಶ್ವರ ಹಸಬಿ, ಡಾ. ರಾಜಾಶಂಕರ ಎಸ್., ಪ್ರಾಚಾರ್ಯ ಡಾ. ಗುರುಶಾಂತಪ್ಪ ಯಲಗಚ್ಚಿನ, ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಲಕ್ಷ್ಮೀಕಾಂತ ಲೋಕರೆ, ಡಾ. ಮಂಜುನಾಥ ನೇಕಾರ, ನರ್ಸಿಂಗ್ ಕಾಲೇಜ್ ಉಪ ಪ್ರಾಚಾರ್ಯ ಎಚ್.ಬಿ. ರಾಮದುರ್ಗ ಇತರರು ಇದ್ದರು.