ಮೇ೧೨ ರಂದು ಜನಜಾಗೃತಿ ಕಾರ್ಯಕ್ರಮ

NACHAPPA
Published on

ಮಡಿಕೇರಿ: ರಾಷ್ಟ್ರೀಯ ಜನಗಣತಿ ಮತ್ತು ಜಾತಿಗಣತಿಯ ಸಂದರ್ಭ ಕೊಡವ ಬುಡಕಟ್ಟು ಜನಾಂಗಕ್ಕೆ ಪ್ರತ್ಯೇಕ ಕೋಡ್ ಮತ್ತು ಕಾಲಂ ಅಳವಡಿಸಬೇಕು. ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಕಲ್ಪಿಸಬೇಕು. ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮೇ೧೨ ರಂದು ಪಾಡಿನಾಡ್‌ನ ಕಕ್ಕಬೆಯಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸೋಮವಾರ ಬೆಳಿಗ್ಗೆ ೧೦.೩೦ ಗಂಟೆಗೆ ಕಕ್ಕಬೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತ್ಯೇಕ ಕಾಲಮ್ ಮತ್ತು ಕೋಡ್ ನಿಂದ ಕೊಡವ ಸಮುದಾಯಕ್ಕೆ ಆಗಬಹುದಾದ ಲಾಭಗಳನ್ನು ವಿವರಿಸಲಾಗುವುದು. ೨೦೨೫-೨೬ರ ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಕೊಡವರಿಗೆ ಪ್ರತ್ಯೇಕ ಕೋಡ್ ಹಾಗೂ ಕಾಲಮ್ ವ್ಯವಸ್ಥೆ ಮಾಡಬೇಕು. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಸಂವಿಧಾನದಡಿ ಕೊಡವರನ್ನು ಎಸ್‌ಟಿ ಪಟ್ಟಿಯಲ್ಲಿ ಸೇರಿಸಬೇಕು. ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದ್ದಾರೆ.

ಮಾನವ ಸರಪಳಿ ಕಾರ್ಯಕ್ರಮ ಕೊಡವ ಸಮುದಾಯದ ಹಕ್ಕೊತ್ತಾಯಗಳಿಗೆ ಮತ್ತು ಜಾಗೃತಿ ಮೂಡಿಸುವುಕ್ಕಾಗಿ ನಡೆಯುತ್ತಿದೆ. ಕಕ್ಕಬ್ಬೆ ಭಾಗದ ಕೊಡವ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಎನ್.ಯು.ನಾಚಪ್ಪ ಅವರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net