5 ರಿಂದ ಗೊಳಸಂಗಿಯಲ್ಲಿ ಜನಜಾಗೃತಿ ಸೇವಾಯಾತ್ರೆ

Vijayavani-logo
Published on

ಗೊಳಸಂಗಿ: ಸಮಾಜದಲ್ಲಿರುವ ಅಸೂಯೆ, ಅಂಧಕಾರವನ್ನು ಹೋಗಲಾಡಿಸಲು ಒಟ್ಟು 30 ಗ್ರಾಮಗಳಲ್ಲಿ ಜನಜಾಗೃತಿ ಸೇವಾಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಆ.5 ರಿಂದ 13 ರವರೆಗೆ ಗೊಳಸಂಗಿ ಗ್ರಾಮದಲ್ಲಿ ಯಾತ್ರೆ ನಡೆಯಲಿದೆ ಎಂದು ಸಮೀಪದ ಹುಣಶ್ಯಾಳ ಪಿಬಿ ಗ್ರಾಮದ ಹಿರೇಮಠದ ಆನಂದ ದೇವರು ಹೇಳಿದರು.

ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ದುಶ್ಚಟಗಳ ಭಿೆ ಸದ್ಗುರುಗಳ ದೀೆ ೂಷವಾಕ್ಯದೊಂದಿಗೆ ಒಂಬತ್ತು ದಿನ ಗೊಳಸಂಗಿ ಗ್ರಾಮದ ಪ್ರತಿ ಬೀದಿಗಳಲ್ಲಿ ಸಂಚರಿಸಿ ದುಶ್ಚಟಗಳಿಂದ ಹಾಳಾಗುತ್ತಿರುವ ಯುವಕರಿಂದ ಬೀಡಿ, ಸಿಗರೇಟ್​, ಗುಟಕಾ, ಮದ್ಯಾಪಾನದಂಥ ವ್ಯಸನಯುಕ್ತ ಪದಾರ್ಥಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡು ಪರ್ಯಾಯವಾಗಿ ರುದ್ರಾ ಮಾಲೆಗಳನ್ನು ನೀಡಿ ಮುಂದಿನ ನಿಮ್ಮ ಜೀವನ ಉಜ್ವಲವಾಗಿರಲಿ ಎಂದು ಹಾರೈಸುತ್ತ ಜನಜಾಗೃತಿ ಮೂಡಿಸುವುದು ಸೇವಾಯಾತ್ರೆಯ ಮೂಲ ಉದ್ದೇಶವಾಗಿದೆ ಎಂದರು.

ಈಗಾಗಲೇ 23ನೇ ಗ್ರಾಮವಾಗಿ ಅಂಗಡಗೇರಿ ಗ್ರಾಮದಲ್ಲಿ ಯಾತ್ರೆ ನಡೆದಿದೆ. ಆ.5 ರಿಂದ ಗೊಳಸಂಗಿಯಲ್ಲಿ 24ನೇ ಸೇವಾಯಾತ್ರೆ ಚಾಲನೆ ಪಡೆಯಲಿದೆ. ನವೆಂಬರ್​ ಒಳಗಾಗಿ 30 ಗ್ರಾಮ, ಪಟ್ಟಣಗಳಲ್ಲಿ ಸೇವಾಯಾತ್ರೆಯನ್ನು ಪೂರೈಸಿ ಅಕ್ಟೋಬರ್​ 3 ರಿಂದ 13 ರವರೆಗೆ ಹುಣಶ್ಯಾಳ ಪಿಬಿ ಗ್ರಾಮದಲ್ಲಿ ಬಸವನಾಡ ನವರಾತ್ರಿ ಉತ್ಸವ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರವಚನ, ರುದ್ರಾಧಾರಣೆ, ಸದ್ಭಾವನಾ ಯಾತ್ರೆ, ಜನಜಾಗೃತಿ ಪಥಸಂಚಲನ, ಆಶೀರ್ವಚನ, ಸಂಗೀತಗಾಯನ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ದಾಸೋಹಿಗಳಿಗೆ ಗೌರವಾರ್ಪಣೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಅಮರೇಶಗೌಡ ಪಾಟೀಲ ಮಾತನಾಡಿ, ಗೊಳಸಂಗಿಯಲ್ಲಿ ಆ.5 ರಂದು ಸಂಜೆ 5ಕ್ಕೆ ಗ್ರಾಮದ ವಿಠ್ಠಲ&ರುಕ್ಮಿಣಿ ಮಂದಿರದಿಂದ ಅದ್ದೂರಿ ಮೆರವಣಿಗೆಯ ಮೂಲಕ ಆನಂದ ದೇವರು ಅವರನ್ನು ಬಸವೇಶ್ವರ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಗುವುದು. ಅಂದಿನಿಂದ ಆ.13 ರವರೆಗೆ ಪ್ರತಿದಿನ ರಾತ್ರಿ 7 ಗಂಟೆಗೆ ಶ್ರೀಗಳ ನೇತೃತ್ವದಲ್ಲಿ ಅಂಬಳನೂರು ಹಿರೇಮಠದ ಸಂಗಮನಾಥ ದೇವರು ನಾಲತವಾಡದ ವೀರೇಶ್ವರ ಶರಣರ ಜೀವನ ದರ್ಶನದ ಪ್ರವಚನ ಹೇಳಲಿದ್ದಾರೆ ಎಂದರು.

ದೇವರಾಜ ಯರಕಿನಾಳ, ಸುರೇಶ ಹೂಗಾರರಿಂದ ಸಂಗೀತ ಕಾರ್ಯಕ್ರಮ ಇರುವುದು. ಒಂಬತ್ತು ದಿನ ಗಿಡಮರ ಬೆಳೆಸಿ, ಪರಿಸರ ಉಳಿಸಿ ಅಭಿಯಾನ ಹಾಗೂ ದಾನೇಶ್ವರಿ ಆಸ್ಪತ್ರೆ ವತಿಯಿಂದ ಆರೋಗ್ಯ ಉಚಿತ ತಪಾಸಣೆ ನಡೆಸಲಾಗುವುದು ಎಂದರು.
ಸಭೆಯಲ್ಲಿ ಸಂಗಪ್ಪ ಕೋಲಾರ, ಶಂಕರಗೌಡ ಪಾಟೀಲ, ಹನುಮಂತ ಅಂಗಡಗೇರಿ, ರಾಮನಗೌಡ ಮಮದಾಪುರ, ಶ್ರೀಶೈಲ ಮಮ್ಮದಕೋಟಿ, ಭೀಮಶಿ ಜೈನಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net