ಪರಿಸರ ಹಾನಿಕಾರಕದ ವಿರುದ್ಧ ಜನಜಾಗೃತಿಯೊಂದೇ ದಾರಿ: ಎಸ್‌ಎಪಿಎಸಿಸಿ ಸಂಶೋಧನಾ ಕೇಂದ್ರದ ವಿಜ್ಞಾನಿ ಪ್ರೊ. ಸುಧಿ ಶೇಷಾದ್ರಿ ಅಭಿಮತ

NAN_1553
Published on

ಮೈಸೂರು: ಪರಿಸರ ಕಾಪಾಡಲು ಹವಾಮಾನ ಬದಲಾವಣೆ ಹತ್ತಿಕ್ಕುವ ಉಪಾಯಗಳ ಅಳವಡಿಕೆ, ಹಸಿರು ಮನೆ, ಅನಿಲಗಳ ಹೊರ ಹೊಮ್ಮುವಿಕೆ ಕಡಿತಗೊಳಿಸಲು ಜನಜಾಗೃತಿ ಮೂಡಿಸುವುದೊಂದೇ ಈಗಿರುವ ದಾರಿ ಎಂದು ಎಸ್‌ಎಪಿಎಸಿಸಿ ಸಂಶೋಧನಾ ಕೇಂದ್ರದ ವಿಜ್ಞಾನಿ ಪ್ರೊ. ಸುಧಿ ಶೇಷಾದ್ರಿ ಅಭಿಪ್ರಾಯಪಟ್ಟರು.
ಮೈಸೂರು ಗೆಳೆಯರ ಬಳಗ, ತುಮಕೂರಿನ ಗಾಂಧಿ ಸಹಜ ಬೇಸಾಯ ಶಾಲೆ ಮತ್ತು ರಾಣಿ ಬಹದ್ದೂರ್ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಎಸ್‌ಎಪಿಎಸಿಸಿ ತಾಂತ್ರಿಕ ಪರಿಣತರೊಂದಿಗೆ ವಾಯುಗುಣ ವೈಪರೀತ್ಯ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.
ಹವಾಮಾನ ವೈಪರೀತ್ಯಕ್ಕೆ ಭಾರತವೂ ಸೇರಿದಂತೆ ಅಭಿವೃದ್ಧಿ ದೇಶಗಳಾದ ಅಮೆರಿಕ, ಚೀನಾ, ಯುರೋಪ್, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳ ಶೇ.70ರಷ್ಟು ಕೊಡುಗೆ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ, ಕಲ್ಲಿದ್ದಲು, ಅನಿಲ ನಿಕ್ಷೇಪ ಸೇರಿದಂತೆ ಇತ್ಯಾದಿ ಸಂಪನ್ಮೂಲಗಳು ಇನ್ನು 20 ವರ್ಷಗಳಲ್ಲಿ ಬರಿದಾಗುವ ಸಾಧ್ಯತೆ ಹೆಚ್ಚಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬೆಳೆ ನಷ್ಟ
ಹವಾಮಾನ ಬದಲಾವಣೆಯಿಂದ ಉಂಟಾಗುವ ಹಾನಿಯಿಂದ ದೇಶದಲ್ಲಿ ಸುಮಾರು 5 ಲಕ್ಷ ಕೋಟಿಗೂ ಅಧಿಕ ಬೆಳೆ ನಷ್ಟ ಉಂಟಾಗುತ್ತಿದೆ. ಇದರಿಂದ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಅಂತಾರಾಷ್ಟ್ರೀಯ ಹವಾಮಾನ ಬದಲಾವಣೆ ನಿಧಿಯಿಂದ ಸಿಗುವ ಹಣಕಾಸು ನೆರವಿನಲ್ಲಿ ಪ್ರತಿ ಎಕರೆಗೆ ಕನಿಷ್ಠ 22 ಸಾವಿರದಷ್ಟು ನೆರವನ್ನು ಪರಿಹಾರ ರೂಪದಲ್ಲಿ ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಎಸ್‌ಎಪಿಎಸಿಸಿ ಸಂಶೋಧನಾ ವಿಭಾಗದ ಸಂಪನ್ಮೂಲ ವ್ಯಕ್ತಿ ಸಾಗರ್ ಧಾರಾ ಮಾತನಾಡಿ, ರಾಷ್ಟ್ರೀಯ ಹಸಿರು ಅನಿಲ ಹೊರಸೂಸುವಿಕೆ ಪ್ರಮಾಣವನ್ನು ಕೃಷಿ ಕ್ಷೇತ್ರದಲ್ಲಿ ಶೇ.14ರಷ್ಟು ಎಂದು ಬಿಂಬಿಸಲಾಗುತ್ತಿದೆ. ಅದು ತಪ್ಪು ಲೆಕ್ಕಾಚಾರವಾಗಿದ್ದು, ವಾಸ್ತವವಾಗಿ ಅದು ಶೇ.1ಕ್ಕಿಂತ ಕಡಿಮೆ ಇದೆ. ದೇಶದ 155 ಮಿ.ಹೆಕ್ಟೇರ್ ಕೃಷಿ ಭೂಮಿಯಲ್ಲಿ ಸುಮಾರು 1000 ದಶಲಕ್ಷ ಟನ್‌ಗಳಷ್ಟು ಕಾರ್ಬನ್ ಡೈ ಆಕ್ಸೈಡ್ ಜಮೆಯಾಗುತ್ತಿದ್ದು, ಇಂದಿನ ಮಾರುಕಟ್ಟೆ ಮೌಲ್ಯ 100 ಬಿಲಿಯನ್ ಡಾಲರ್‌ಗಳಷ್ಟು ಆಗುತ್ತದೆ ಎಂದರು.
ಗಾಂಧಿ ಸಹಜ ಬೇಸಾಯ ಶಾಲೆಯ ಕೃಷಿ ವಿಜ್ಞಾನಿ ಡಾ.ಮಂಜುನಾಥ ಮಾತನಾಡಿ, ಇಂದು ಭೂಮಿ ತಾಪಮಾನ ಏರುತ್ತಿರುವುದು ಜ್ವಲಂತ ಸಮಸ್ಯೆಯಾಗಿದೆ. ಮಾನವ ತಾನು ಮಾಡಿದ ತಪ್ಪನ್ನು ತಿದ್ದಿಕೊಳ್ಳದೆ ಅನ್ಯ ಮಾರ್ಗವಿಲ್ಲ. ಸಮುದಾಯ ಜಮೀನುಗಳಲ್ಲಿ ಮರಗಿಡಗಳನ್ನು ಹೆಚ್ಚು ಬೆಳೆಸಬೇಕು, ಮಣ್ಣು ಮತ್ತು ನೀರು ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ಸಲಹೆ ನೀಡಿದರು.
ಪರಿಸರವಾದಿ ಸಿ.ಯತಿರಾಜು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಎಂದು ಬಿಂಬಿಸುತ್ತಿರುವ ರಾಷ್ಟ್ರಗಳೇ ನಿಜವಾದ ಪರಿಸರಕ್ಕೆ ಮಾರಕವಾದ ಕಾರ್ಯಗಳನ್ನು ಮಾಡುತ್ತಿವೆ. ಅಭಿವೃದ್ಧಿ ಎಂದರೆ ದೊಡ್ಡ ದೊಡ್ಡ ಡ್ಯಾಂಗಳನ್ನು ಕಟ್ಟಿದರೆ ಮಾತ್ರ ಎನ್ನುವ ಭ್ರಮೆಯಿಂದ ಹೊರ ಬರಬೇಕಿದೆ ಎಂದು ಹೇಳಿದರು.
ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳು ಸುಸ್ಥಿರವಾಗಿದ್ದರೆ ಮಾತ್ರ ನಮ್ಮ ಭೂಮಿ ಉಳಿಸಲು ಸಾಧ್ಯ. ಇಲ್ಲವಾದರೆ ಮನುಷ್ಯನ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕೆಲಸಗಳಿಂದ ವಿನಾಶ ಕಂಡಿತ ಎಂದು ಎಚ್ಚರಿಸಿದರು.
ರೈತ ಮುಖಂಡ ಹೊನ್ನೂರು ಪ್ರಕಾಶ ಮಾತನಾಡಿ, ಇಂದು ನಮ್ಮ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಬಹುದೊಡ್ಡ ಒತ್ತಡ ಸೃಷ್ಟಿ ಮಾಡಿಕೊಂಡಿದ್ದು, ಇದರಿಂದ ಭೂಮಿ, ನೀರು, ಗಾಳಿ, ಅರಣ್ಯ ಜೀವ ವೈವಿಧ್ಯ ಹಾಗೂ ಜೈವಿಕ ಸಂಪನ್ಮೂಲಗಳ ಗುಣಮಟ್ಟ, ವಿಸ್ತರಾದಲ್ಲಿ ಕುಗ್ಗುತ್ತಿದೆ ಎಂದು ವಿಷಾಧಿಸಿದರು.
ಆದ್ದರಿಂದ ನಾವೆಲ್ಲರೂ ಈ ಬಗ್ಗೆ ಎಚ್ಚೆತ್ತು ನಮ್ಮ ನೈಸರ್ಗಿಕ ಸಂಪನ್ಮೂಲವನ್ನು ಸುಸ್ಥಿರವಾಗಿ ಅಭಿವೃದ್ಧಿಪಡಿಸಿ ಸಂರಕ್ಷಿಸುವ ಅಗತ್ಯವಿದೆ. ಮುಂದಿನ ಪೀಳಿಗೆಗೆ ಪರಿಸರದ ಶುದ್ಧತೆ ನೀಡಬೇಕಿದೆ ಎಂದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ವಿನಯಚಂದ್ರ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಸಿ.ಪಿ.ಮಾಧವನ್, ರಾಜಕೀಯ ವಿಶ್ಲೇಷಕ ಶಿವಸುಂದರ್, ಮೈಸೂರು ಗೆಳೆಯರ ಬಳಗದ ಕರುಣಾಕರನ್, ಅಭಿರುಚಿ ಗಣೇಶ, ಕೊಳ್ಳೇಗಾಲ ಜೆಎಸ್‌ಬಿ ಪ್ರತಿಷ್ಠಾನದ ಎಸ್.ಶಶಿಕುಮಾರ್, ಸೂಸಿ ಸಂಸ್ಥೆಯ ನಾಗರಾಜು, ರಾಣಿ ಬಹದ್ದೂರ್ ಸಂಸ್ಥೆಯ ಪ್ರಸಾದ, ನಿವೃತ್ತ ಇಂಜಿನಿಯರ್ ನರೇಂದ್ರ ಕುಮಾರ, ನೀರೇಶ ಗುಡ್ ಅರ್ಥ್ ಸಂಸ್ಥೆಯ ವಿನೋದ, ಕರ್ನಾಟಕ ರಾಷ್ಟ್ರ ಸಮಿತಿಯ ಸೋಮಸುಂದರ, ಓಯಾಸಿಸ್ ಫೌಂಡೇಶನ್‌ನ ದೊರೆಸ್ವಾಮಿ, ಸಿಐಟಿಯು ಮಹದೇವಯ್ಯ, ಎಐಕೆಕೆಎಂಎಸ್‌ನ ಎಸ್.ಎನ್.ಸ್ವಾಮಿ, ಇಎಸ್‌ಜಿ ಸಂಸ್ಥೆಯ ಭಾರ್ಗವಿ, ವಿವಿಧ ಸಂಘಟನೆಯ ತೆರಕಣಾಂಬಿ ಶಾಂತಮಲ್ಲಪ್ಪ, ರವೀಶ, ಮಂಜುನಾಥ ಭಟರಹಳ್ಳಿ, ಸತ್ತೇಗಾಲದ ಪ್ರಶಾಂತ ಜಯರಾಂ, ಚಂದ್ರಶೇಖರ್ ಮೇಟಿ, ಕೃಷಿ ವಿಜ್ಞಾನಿ ಡಾ.ಮಹದೇವಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net