

ಗೋಣಿಕೊಪ್ಪ:ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಮತ್ತು ಕೊಡಗಿಗೆ ಮಾರಕವಾಗಿರುವ ಕಾನೂನನ್ನು ಜಾರಿಗೆ ತರುವ ಮೂಲಕ ಕೊಡವರನ್ನು ಶೋಷಣೆ ಮಾಡುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದರು.
ಸಿದ್ದಾಪುರದ ಕಾಫಿ ತೋಟಗಳು ಸೇರಿದಂತೆ ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಕುಟ್ಟದಲ್ಲಿ ಆಯೋಜಿಸಿದ್ದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಕೊಡವ ಲ್ಯಾಂಡ್‌ಗೆ ಮಾರಕವಾಗಿರುವ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್‌ಶಿಪ್, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಫಿಯಾವಾಗಿದ್ದು, ಬಂಡವಾಳಶಾಹಿಗಳಿಗೆ ನೆರವಾಗುವ ಕಾನೂನನ್ನು ರೂಪಿಸಿ ಕೊಡವರಿಗೆ ಮಾತೃಭೂಮಿಯಲ್ಲಿ ನೆಲೆ ಇಲ್ಲದಂತೆ ಮಾಡುವ ಹುನ್ನಾರ ಸರ್ಕಾರದ ಹಿಂದಿದೆ. ಇದಕ್ಕೆ ಕೊಡವ ವಿರೋಧಿಗಳ ಬೆಂಬಲವಿದೆ ಎಂದು ಆರೋಪಿಸಿದರು.
ಕುಟ್ಟ ಸಮೀಪದ ಪೂಚೆಕಲ್ಲು ಗ್ರಾಮದಲ್ಲಿ ಜಲಗರ್ಭ ಮತ್ತು ಭೂಗರ್ಭ ಸ್ಫೋಟವಾಗಿದೆ. ಇಲ್ಲಿ ಸಂಭವಿಸಿರುವ ಅನಾಹುತ ಲಕ್ಷ್ಮಣ ತೀರ್ಥ ವ್ಯಾಪ್ತಿಗೂ ವ್ಯಾಪಿಸಿ ಕ್ರಮೇಣ ಇಡೀ ಕೊಡಗಿಗೆ ಅನಾಹುತ ಎದುರಾಗಬಹುದು. ಪ್ರಸ್ತುತ ಪೂಚೆಕಲ್ಲು ಭಾಗದಲ್ಲಿ ವಾಹನಗಳ ಸಂಚಾರವಿಲ್ಲದೆ ಜನರಿಗೆ ತೊಂದರೆಯಾಗಿದೆ. ಕುಟ್ಟ ಅತಿ ಎತ್ತರದ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿದ್ದು, ವಿಶ್ವ ಪಾರಂಪರಿಕ ತಾಣವಾಗಿದೆ. ಈ ನುಡವೆ ಸರ್ಕಾದ ಕಾನೂನು ಕೊಡವರಿಗೆ ಅನ್ವಯವಾಗುತ್ತಿದ್ದು, ಬಂಡವಾಳಶಾಹಿಗಳು ಮಾತ್ರ ಆಡಳಿತ ವ್ಯವಸ್ಥೆಯ ಕೃಪಾ ಕಟಾಕ್ಷದಿಂದ ಯಾವುದೇ ಸೂಕ್ಷ್ಮ ಪರಿಸರ ವಲಯದ ಕಾನೂನಿಗೆ ಒಳಪಡುತ್ತಿಲ್ಲ. ಕೊಡವರು ಮಾತ್ರ ಎಲ್ಲ ಕಾನೂನುಗಳಿಗೆ ಒಳಪಟ್ಟು ಆಡಳಿತ ವ್ಯವಸ್ಥೆಯಿಂದ ಕಿರುಕುಳ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಸಿಎನ್‌ಸಿ ವತಿಯಿಂದ ಆ.29 ಮೂರ್ನಾಡು, ಸೆ.9 ನಾಪೋಕ್ಲು ಹಾಗೂ ಸೆ.10 ರಂದು ಚೇರಂಬಾಣೆಯಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ನಾಚಪ್ಪ ಇದೇ ಸಂದರ್ಭ ಮಾಹಿತಿ ನೀಡಿದರು.
ಜನಜಾಗೃತಿ ಕಾರ್ಯಕ್ರಮದಲ್ಲಿ ಪ್ರಮುಖರಾದ ತೀತಿರ ಮನು, ಅಜ್ಜಿಕುಟೀರ ಲೋಕೇಶ್, ಬಾಚರಣಿಯಂಡ ಚಿಪ್ಪಣ್ಣ, ಮಚ್ಚಮಾಡ ಪ್ರಕಾಶ್, ಪೆಮ್ಮಣಮಾಡ ಪ್ರಭು, ಕೈಬಿಲಿರ ದೀಪು, ತೀತಿರ ರಘು ಮತ್ತಿತರರು ಉಪಸ್ಥಿತರಿದ್ದರು.