ಕೊಡಗಿನ ಉಳಿವಿಗಾಗಿ ಜನಜಾಗೃತಿ

Oplus_0
ಜನ ಜಾಗೃತಿ ಹಿನ್ನೆಲೆಯಲ್ಲಿ ರಚಿಸಲಾದ ಮಾನವ ಸರಪಳಿ.
Published on

ವಿರಾಜಪೇಟೆ: ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್‌ಸಿ ) ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.

ಬೃಹತ್ ಭೂಪರಿವರ್ತನೆ ಮತ್ತು ಭೂ ವಿಲೇವಾರಿ ವಿರುದ್ಧ ಸಿಎನ್‌ಸಿ ವತಿಯಿಂದ ವಿರಾಜಪೇಟೆ ಗಡಿಯಾರ ಕಂಬದ ಬಳಿ ಬುಧವಾರ ಆಯೋಜಿಸಿದ್ದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಕೊಡವ ಲ್ಯಾಂಡ್‌ನ ಸಂರಕ್ಷಣೆಗಾಗಿ ಸರ್ವ ಕೊಡವರು ಭೂಮಾಫಿಯಾದ ವಿರುದ್ಧ ಎಚ್ಚೆತ್ತುಕೊಳ್ಳಬೇಕೆಂದು ಕರೆನೀಡಿದರು.

ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಕೊಡವರ ಪರ ನಡೆಸುತ್ತಿರುವ ಕಾನೂನು ಹೋರಾಟಕ್ಕೆ ವಿರುದ್ಧವಾಗಿ ಅರ್ಜಿ ಸಲ್ಲಿಸಲು ಕೆಲವು ಕೊಡವ ವಿರೋಧಿಗಳು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು. ಭಾಗಮಂಡಲದಲ್ಲಿ ಕೊಡವ ಟ್ರಸ್ಟ್ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನದ ಕಾಮಗಾರಿಗೆ ಭೂಪರಿವರ್ತನೆ ಮಾಡಲು ಅವಕಾಶ ನೀಡಿಲ್ಲ. ಬಲಾಢ್ಯ ಸಂವಿಧಾನೇತರ ಶಕ್ತಿಗಳು ಇದಕ್ಕೆ ಅಡ್ಡಿಯಾಗಿವೆ. ಆದರೆ ಭೂಮಾಫಿಯಾ ಮತ್ತು ಕಾರ್ಪೋರೇಟ್ ವಲಯಗಳಿಗೆ ಯಾವುದೇ ವಿಳಂಬ ಮಾಡದೆ ಭೂಪರಿವರ್ತನೆ ಮತ್ತು ಭೂ ವಿಲೇವಾರಿ ಮಾಡಿಕೊಡಲಾಗುತ್ತಿದೆ. ತಡಿಯಂಡ್ ಮೋಳ್‌ನಿಂದ ಹಿಡಿದು ಪುಷ್ಪಗಿರಿ ಮತ್ತು ಬ್ರಹ್ಮಗಿರಿವರೆಗೆ ನಿಷೇಧಿತ ಪ್ರದೇಶದಲ್ಲಿ ಭೂಪರಿವರ್ತನೆಯಾಗುತ್ತಿದೆ. ತಲಕಾವೇರಿ, ಭಾಗಮಂಡಲ ಕೊಡವ ಟ್ರಸ್ಟ್ ಅವರಿಗೆ ಸಮುದಾಯ ಭವನ ನಿರ್ಮಾಣ ಮಾಡಲು ಅವಕಾಶ ನಿರಾಕರಣೆ ಮಾಡಿರುವುದು ಸಂವಿಧಾನದ ಉಲ್ಲಂಘನೆಯಾಗಿದೆ. ಅತ್ಯಂತ ಸಣ್ಣ ಸಮುದಾಯವೊಂದು ಧಾರ್ಮಿಕ ಆಚಾರ-ವಿಚಾರಗಳನ್ನು ಮುಕ್ತವಾಗಿ ಆಚರಣೆ ಮಾಡಲು ಅಡ್ಡಿಪಡಿಸಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಡವರು ತಮ್ಮ ಜನ್ಮಭೂಮಿಯಲ್ಲಿ ನ್ಯಾಯಸಮ್ಮತವಾಗಿ ಮನೆ ನಿರ್ಮಿಸಲು ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿದರೆ ಇಲ್ಲಸಲ್ಲದ ನಿಯಮ ರೂಪಿಸಿ ಕಿರುಕುಳ ನೀಡಲಾಗುತ್ತಿದೆ. ಭೂಕುಸಿತ ಪ್ರದೇಶದಲ್ಲಿ ಬೃಹತ್ ರೆಸಾರ್ಟ್ ನಿರ್ಮಾಣಗೊಂಡಿದೆ. ದೇವರಕಾಡು ಲೂಟಿ ಮಾಡಿ ಕೊಡವರ ಪವಿತ್ರ ದೇವನೆಲೆ ಬಳಿಯಲ್ಲಿ ರೆಸಾರ್ಟ್ ಮಾಫಿಯಾ ಮತ್ತು ಡೆವಲಪರ್‌ಗೆ ಟೌನ್‌ಶಿಪ್ ನಿರ್ಮಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ 79ಎ ಮತ್ತು 79ಬಿಯನ್ನು ದುರ್ಲಾಭಪಡಿಸಿಕೊಂಡು ಕೃಷಿ ಜಮೀನು, ಭತ್ತದ ಗದ್ದೆಗಳು ಮತ್ತು ಕಾಫಿ ತೋಟಗಳನ್ನು ಪರಿವರ್ತನೆ ಮಾಡಲಾಗುತ್ತಿದೆ. 3 ಕೊಡಗು ಜಿಲ್ಲೆಯಲ್ಲೂ ಆಂಧ್ರದ ಹಣ ಬಳಕೆಯಾಗುತ್ತಿದ್ದು, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಾಗುತ್ತಿದೆ. ಬೆಂಗಳೂರು, ತಿರುವನಂತಪುರ, ಚೆನ್ನೈ, ಹೈದರಬಾದ್ ಸೇರಿದಂತೆ ದೇಶದ ವಿವಿಧೆಡೆಯ ಭೂಮಾಫಿಯಾ ಮತ್ತು ರಾಜಕೀಯ ಸಂಯೋಜಿತ ಗುಂಪುಗಳು ಭೂ ಪರಿವರ್ತನೆಯಲ್ಲಿ ತೊಡಗಿವೆ. ಇದು ಪವಿತ್ರ ಕೊಡವ ಲ್ಯಾಂಡ್‌ನ ನಾಶಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಕೊಡವ ಜನಾಂಗದ ಹಕ್ಕುಗಳ ರಕ್ಷಣೆಗೆ ಅಂತಾರಾಷ್ಟ್ರೀಯ ಮಾದರಿಯಂತೆ ಕಾನೂನು ಜಾರಿಯಾಗುವ ಅಗತ್ಯವಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಅಗತ್ಯವಾಗಿದ್ದು, ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಲಾಗುವುದು ಎಂದು ಎನ್.ಯು.ನಾಚಪ್ಪ ಹೇಳಿದರು.

ಸಮಿತಿಯ ಸದಸ್ಯರು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹಾಗೂ ಕೊಡವ ಲ್ಯಾಂಡ್ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಪ್ರಮುಖರಾದ ಕರ್ನಲ್ ಬಿ.ಎಂ.ಪಾರ್ವತಿ, ಮುದ್ದಿಯಡ ಲೀಲಾವತಿ, ಮನೆಯಪಂಡ ಕಾಂತಿ ಸತೀಶ್, ಬಲ್ಲಡಿಚಂಡ ಬೇಬಿ ಮೇದಪ್ಪ, ಮಾಳೇಟಿರ ಶ್ರೀನಿವಾಸ್, ಮಾಚೇಟಿರ ಚೋಟು ಕಾವೇರಿಪ್ಪ, ಮಾಳೇಟಿರ ಕುಶಾಲಪ್ಪ, ಬಲ್ಲಚಂಡ ರವಿ, ಸೋಮೆಯಂಡ ಬೋಸು, ಕೇಟೋಳಿರ ಸೋಮಣ್ಣ, ಉದಿಯಂಡ ಚೆಂಗಪ್ಪ, ಸೋಮೆಯಂಡ ರೇಶ ಮಾತಂಡ ಕಂಬ ಉತ್ತಯ್ಯ, ಬಾಳೆಯಡ ಮಂದಪ್ಪ, ಐತಿಚಂಡ ಬನ್ನಿ, ಪಾಲೆಕಂಡ ಪ್ರತಾಪ್, ಅಪ್ಪಾರಂಡ ವಿವೇಕ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net