

ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ
ವರ್ಷಂಪ್ರತಿ ಕ್ರಿಸ್‌ಮಸ್ ಬಂತೆಂದರೆ ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದ ಬೋಳದಬೈಲು ನಿವಾಸಿ ವಿನ್ಸೆಂಟ್ ಮಿನೇಜಸ್ ಸಾಂತಾಕ್ಲಾಸ್ ವೇಷ ಧರಿಸಿ ಪರ್ಯಟನೆಯಲ್ಲಿರುತ್ತಾರೆ. ಅಲ್ಲಲ್ಲಿ ತೆರಳಿ ವಿವಿಧ ಪಿಡುಗುಗಳ ಬಗ್ಗೆ ಜಾಗೃತಿ ಮೂಡಿಸುವ ಈ ಪರ್ಯಟನೆಗೆ ಈಗ ಬೆಳ್ಳಿಹಬ್ಬದ ಸಂಭ್ರಮ.
ಕ್ರಿಸ್‌ಮಸ್ ದಿನದಿಂದ ಒಂದು ವಾರ ಮುಂಚಿತವಾಗಿ ಸಾಂತಾಕ್ಲಾಸ್ ವೇಷ ಧರಿಸಿ ಬೆಳಗ್ಗಿನಿಂದ ಸಂಜೆಯವರೆಗೆ ಶಾಲೆ-ಕಾಲೇಜುಗಳು, ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ಅನೇಕ ಕಡೆ ತಮ್ಮ ಆಕ್ಟಿವಾಗೆ ಬಲೂನುಗಳಿಂದ ಶೃಂಗರಿಸಿ ಪರ್ಯಟನೆ ಮಾಡುತ್ತಾರೆ. ಸ್ವಚ್ಛ ಭಾರತ ಜಾಗೃತಿ, ಪರಿಸರ, ಜಲ ಸಂರಕ್ಷಣೆ, ಡ್ರಗ್ಸ್ ಜಾಗೃತಿಗಾಗಿ ಇವರು ಕೆಲಸ ಮಾಡುತ್ತಿದ್ದಾರೆ.
2000ನೇ ಇಸವಿಯಲ್ಲಿ ಆರಂಭಿಸಿದ ಇವರ ಈ ಸಂದೇಶ ಯಾತ್ರೆ 25 ವರ್ಷಗಳಿಂದ ನಡೆದಿದೆ. ಅನಾರೋಗ್ಯ ಸಂದರ್ಭ ದಿನ ಇಳಿಕೆಯಾದರೂ ಯಾತ್ರೆ ನಿಂತಿಲ್ಲ. ಇವರು ಪದವೀಧರ ಕೃಷಿಕ, ಒಳ್ಳೆಯ ನಿರೂಪಕ ಹಾಗೂ ಕಲಾವಿದ. ತಮ್ಮ ಕೃಷಿ ಹಾಗೂ ಪ್ರವೃತ್ತಿಯಲ್ಲಿ ಬಂದ ಹಣವನ್ನು ಸಾಂತಾಕ್ಲಾಸ್ ಯಾತ್ರೆಗೆ ಮೀಸಲಿಡುತ್ತಾರೆ. ದಾನಿಗಳ ನೆರವೂ ಕೆಲವೊಮ್ಮೆ ದೊರೆತಿದೆ. ಉಪ್ಪಾರಪಳಿಕೆ ಶಾಲೆ ಶಿಕ್ಷಕಿಯಾಗಿರುವ ಇವರ ಪತ್ನಿ ಕ್ರಿಸ್ತೀನಾ ಮಾರ್ಟಿಸ್ ಇವರಿಗೆ ಸಂಪೂರ್ಣ ಸಹಕಾರ ನೀಡುತ್ತಾರೆ.
ವಿನ್ಸೆಂಟ್ ಅವರ 25ನೇ ವರ್ಷದ ಪರ್ಯಟನೆಯ ಕಾರ್ಯ ಶ್ಲಾಘಿಸಿ ಮಂಗಳೂರಿನ ಬೊಂದೇಲ್ ಚರ್ಚಿನಲ್ಲಿ ಇವರನ್ನು ಸನ್ಮಾನಿಸಲಾಗಿದೆ. ಇವರ ಈ ಜಾಗೃತಿ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
2000ನೇ ಇಸವಿಯಲ್ಲಿ ಕೊಕ್ಕಡದಲ್ಲಿ ಅಂದಿನ ಧರ್ಮಗುರು ವಲೇರಿಯನ್ ಸಾಂತಾಕ್ಲಾಸ್ ಡ್ರೆಸ್ ತಂದುಕೊಟ್ಟು ಕ್ರಿಸ್‌ಮಸ್ ಸಂದೇಶ ಸಾರಲು ಹೇಳಿದರು. ನಂತರ ಇತರ ಧರ್ಮದವರಿಗೂ ಕ್ರಿಸ್‌ಮಸ್ ಶುಭಾಶಯ ತಿಳಿಸಲು ಹೊರಗಡೆ ಹೋಗಬೇಕು ಎಂದರು. ಈಗ 25ನೇ ವರ್ಷದ ಯಾತ್ರೆ ಪೂರ್ಣಗೊಳಿಸಿದ್ದೇನೆ. ಫಾ.ವಲೇರಿಯನ್ ನಿಧನರಾಗಿದ್ದು ಅವರು ನೀಡಿದ್ದ ಅಂದಿನ ಉಡುಗೆ ಇನ್ನೂ ನನ್ನಲ್ಲಿ ಜೋಪಾನವಾಗಿದೆ. ವಿನ್ಸೆಂಟ್ ಮಿನೇಜಸ್ ಸಾಂತಾಕ್ಲಾಸ್ ವೇಷಧಾರಿ, ಕೊಕ್ಕಡ https://www.vijayavani.net/mangalore-pattla-trust-meeting-at-hotel-gold-finch https://www.vijayavani.net/mangalore-writer-dr-chuntar-16th-book-subhiksha-relese-on-dec-30-at-press-club