

ಚಿಕ್ಕಮಗಳೂರು: ಪ್ರತಿಯೊಬ್ಬ ನಾಗರಿಕನೂ ಮಾದಕ ವಸ್ತುಗಳ ಸೇವನೆಯಿಂದಾಗುವ ಅನಾಹುತಗಳ ಬಗ್ಗೆ ಜನಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಸ್ಪಂದನಾ ಆಸ್ಪತ್ರೆಯ ವೈದ್ಯ ಡಾ. ಸಂತೋಷ್ ನೇತಾ ಕರೆ ನೀಡಿದರು.
ನಗರದ ತೇರಾಪಂಥ್ ಭವನದಲ್ಲಿ ಶನಿವಾರ ಅನುವ್ರತ್ ಸಮಿತಿ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾದಕ ವಸ್ತುಗಳ ಕುರಿತು ಜನಜಾಗೃತಿ ಮೂಡಿಸಬೇಕಾಗಿದೆ. ಇದರ ಜೊತೆಗೆ ವ್ಯಸನ ನಿರ್ಮೂಲನೆ ಮಾಡಲು ಪ್ರಮಾಣವಚನ ಸ್ವೀಕರಿಸಿ ಜನರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು.
ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಮನುಷ್ಯ ದುಶ್ಚಟಗಳಿಗೆ ಬಲಿಯಾದಲ್ಲಿ ೪೫-೫೦ ವರ್ಷಗಳಲ್ಲೇ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ೧೭-೩೫ ವಯೋಮಿತಿಯ ವಯಸ್ಕರು ದುಶ್ಚಟಗಳಿಗೆ ಬಲಿಯಾಗಿ ದಾಸರಾಗುವ ಸಂಭವವಿರುವುದರಿAದ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಎಲ್ಲರೂ ಮಾಡಬೇಕಾಗಿದೆ ಎಂದು ಹೇಳಿದರು.
ದೇಶದಲ್ಲಿ ೧೬ ರಿಂದ ೨೦ ಕೋಟಿ ಮಾದಕ ವ್ಯಸನಿಗಳಿದ್ದಾರೆ. ಧೂಮಪಾನ, ಮದ್ಯಪಾನ, ಗುಟ್ಕಾ ಸೇರಿದಂತೆ ಇತರೆ ಮಾದಕ ವಸ್ತುಗಳ ಸೇವನೆಯಿಂದಾಗಿ ದೇಶದ ಶೇ. ೨೦ ರಷ್ಟು ಜನ ಬಲಿಯಾಗಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.
ದುಶ್ಚಟಗಳಿಂದಾಗುವ ದುಷ್ಪರಿಣಾಮಗಳು ಮತ್ತು ಇದರಿಂದ ಪಾರಾಗುವ ಬಗ್ಗೆ ಯುವಕರು ಜಾಗ್ರತೆ ವಹಿಸುವ ಅಗತ್ಯವಿದೆ. ನಾಲ್ಕು ಹಂತಗಳಲ್ಲಿ ಈ ಮಾದಕ ವಸ್ತುಗಳ ದುಶ್ಚಟಗಳು ಆರಂಭವಾಗುತ್ತವೆ ಎಂದರು.
ದುಶ್ಚಟಗಳನ್ನು ತಡೆದಾಗ ವಯಕ್ತಿಕ ಲಾಭ, ವ್ಯಕ್ತಿತ್ವದ ಲಾಭ, ಆರ್ಥಿಕ, ಸಾಮಾಜಿಕ ಲಾಭದ ಜೊತೆಗೆ ಶೇ. ೨೦ ರಷ್ಟು ಜನ ದೇಶಕ್ಕೆ ದುಡಿಯುವವರು ಲಭ್ಯವಾಗುತ್ತಾರೆ ಎಂದು ಹೇಳಿದರು.
ಈಗಾಗಲೇ ಅನುವ್ರತ ಸಂಸ್ಥೆ ಶಾಲಾ-ಕಾಲೇಜುಗಳಲ್ಲಿ ಹಾಗೂ ಇತರೆ ಎಲ್ಲಾ ವಸತಿ ನಿಲಯಗಳಲ್ಲಿ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುತ್ತಿರುವ ಪ್ರಯತ್ನದ ಕುರಿತು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ತೇರಾಪಂಥ್ ಸಭಾಧ್ಯಕ್ಷ ಮಹೇಂದರ್ ಡೋಸಿ, ಪ್ರಜಾಪಿತಾ ಬ್ರಹ್ಮಕುಮಾರೀಸ್‌ನ ಸಂಚಾಲಕಿ ಭಾಗ್ಯಕ್ಕ, ಅನುವ್ರತ ಸಂಸ್ಥೆಯ ಮಂಜುಬಾಯಿ ಬನ್ಸಾಲಿ, ಗೌತಮ್ ಆಚಾ, ಲಾಲ್‌ಚಂದ್ ಬನ್ಸಾಲಿ, ಕಿಶೋರ್ ಆಚಾ, ಸಜ್ಜನ್‌ರಾಜ್, ಮಹೇಂದ್ರ ಡೋಸಿ, ಪದಮ್ ನಹರ್, ಮನ್‌ಚಂದ್ ಗಾದಿಯಾ, ಸರೋಜಾಬಾಯಿ ಸಿಯಾಲ್, ಚಂದ್ರ ಗಾದಿಯಾ, ಗುಣವತಿ ನಹಾರ್ ಮತ್ತಿತರರಿದ್ದರು.