ಅಪರಾಧ ಕೃತ್ಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು

08 NRD 4
Published on

ನರಗುಂದ: ಪೊಲೀಸ್ ಇಲಾಖೆ ವಿನೂತನವಾಗಿ ರೂಪಿಸಿರುವ ಮನೆ-ಮನೆಗೆ ಪೊಲೀಸ್ ಭೇಟಿ ಕಾರ್ಯಕ್ರಮದ ಭಾಗವಾಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಮನೆಗಳಿಗೆ ಪಿಎಸ್‌ಐ ಇನ್‌ಸ್ಟೆಕ್ಟರ್ ಹಾಗೂ ಸಿಬ್ಬಂದಿ ಭೇಟಿ ನೀಡಿದರು. ಕಳ್ಳತನ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳ ಬಗ್ಗೆ ನಿವಾಸಿಗಳಿಗೆ ಕರಪತ್ರಗಳನ್ನು ನೀಡಿ ಜಾಗೃತಿ ಮೂಡಿಸಿದರು.

ಸಿಪಿಐ ಮಂಜುನಾಥ ನಡುವಿನಮನಿ ನೇತೃತ್ವದಲ್ಲಿ ಸಿಬ್ಬಂದಿ ಠಾಣಾ ವ್ಯಾಪ್ತಿಯ ಕೊಣ್ಣೂರ, ಶಿರೋಳ, ಬನಹಟ್ಟಿ, ಕುರ್ಲಗೇರಿ, ಪಟ್ಟಣದ ಕಸಬಾ, ಅರ್ಭಾಣ, ದಂಡಾಪುರ ಮೊದಲಾದ ಮನೆಗಳಿಗೆ ಭೇಟಿ ನೀಡಿ, ಸೈಬರ್ ಅಪರಾಧ, ಡ್ರಗ್ಸ್, ಗಾಂಜಾ, ಆನ್‌ಲೈನ್ ವಂಚನೆ, ಜೂಜಾಟ, ಅಕ್ರಮ ಮದ್ಯ, ಕಳ್ಳತನ, ದರೋಡೆ ಪ್ರಕರಣಗಳ ಮಾಹಿತಿ ನೀಡಿದರು. ಇಂಥ ಕೃತ್ಯಗಳು ನಡೆಯುತ್ತಿದ್ದರೆ ಅಂತವರ ಕುರಿತು ಹತ್ತಿರದ ಪೊಲೀಸ್ ಠಾಣೆ ಅಥವಾ 112ಗೆ ತುರ್ತು ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಸೈಬರ್ ಅಪರಾಧವು ಪ್ರಪಂಚದಾದ್ಯಂತ ಕಾನೂನು ಜಾರಿ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿದೆ. ಬೆಳೆಯುತ್ತಿರುವ ಆರ್ಥಿಕತೆ, ಬೃಹತ್ ಐಟಿ ಉದ್ಯಮ, ಇ- ಆಡಳಿತ ಮತ್ತು ಆನ್‌ಲೈನ್ ಅಪ್ಲಿಕೇಶನ್‌ಗಳ ಹೆಚ್ಚುತ್ತಿರುವ ಹರಿವು ಮತ್ತು ಬೆಳೆಯುತ್ತಿರುವ ತಂತ್ರಜ್ಞಾನ ಮೊದಲಾದವುಗಳಿಂದ ಸೈಬರ್ ಕ್ರೈಂ ನಡೆಯುತ್ತಿವೆ. ಸಾರ್ವಜನಿಕರು ಯಾವುದೇ ವ್ಯವಹಾರಗಳ ಮಾಡಬೇಕಾದರೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಮೋಸ ಹೋಗುವುದು ಕಟ್ಟಿಟ್ಟ ಬುತ್ತಿ ಎಂದರು. ಪೊಲೀಸರು ಮನೆ-ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕುಟುಂಬದಲ್ಲಿ ವಾಸಿಸುತ್ತಿರುವ ಸದಸ್ಯರ ಹೆಸರು, ಮೊಬೈಲ್ ನಂಬರ್, ವಿಳಾಸ ಮೊದಲಾದ ಮಾಹಿತಿಗಳ ನೋಂದಣೆ ಮಾಡಿಕೊಳ್ಳಲಾಯಿತು.

ಪಿಎಸ್‌ಐಗಳಾದ ಎಫ್.ಎಸ್. ಮಣ್ಣೂರ, ಎಸ್.ವೈ. ಸೊಲ್ಲಾಪುರ, ಎಎಸ್‌ಐಗಳಾದ ಎಸ್.ಎಸ್. ಕಾಶಪ್ಪಯ್ಯನಮಠ, ಫಕೀರಪ್ಪ ಗೋಡಿ, ಡಿ.ಕೆ. ಹಾಲವರ, ಪೇದೆಗಳಾದ ಚಂದ್ರು ಕಾಕನೂರ, ಎಫ್.ಬಿ. ತೂರನೂರ, ಚಂದ್ರು ಹಾದಿಮನಿ, ವಿನಾಯಕ ಕೊಣ್ಣೂರ, ಸುರೇಶ ಚೆಟ್ರಿ, ವಿದ್ಯಾ ನಾಯಕ, ಎಫ್.ಎನ್. ಲಾಡಜಿ, ಸುನಿಲ ಕಾಮತ್, ಬಿ.ಆರ್.ಸುರೇಬಾನ, ಯಮನೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net