

ಬೆಂಗಳೂರು: 79ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಆಗಸ್ಟ್ 16, 17 ಮತ್ತು 18ರಂದು ಒಟ್ಟು ಮೂರು ದಿನಗಳ ಕಾಲ ರಾಜಭವನ ವೀಕ್ಷಿಸಲು ಇದೀಗ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ. ಸದರಿ ಮೂರು ದಿನಗಳು ಸಂಜೆ 6ರಿಂದ 7.30 ರವರೆಗೆ ವೀಕ್ಷಣೆ ಮಾಡಬಹುದಾಗಿದೆ.
ರಾಜಭವನದ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರು ಸರ್ಕಾರದಿಂದ ವಿತರಿಸಿರುವ ಸ್ಪಷ್ಟವಾಗಿ ಭಾವಚಿತ್ರವಿರುವ ಐಡಿ ಕಾರ್ಡ್ ಅನ್ನು ಕಡ್ಡಾಯವಾಗಿ ತಮ್ಮೊಂದಿಗೆ ತರಬೇಕು. ರಾಜಭವನದ ಪ್ರವೇಶದ ಸಂದರ್ಭದಲ್ಲಿ ಕಡ್ಡಾಯವಾಗಿ ಭದ್ರತಾ ತಪಾಸಣೆಗೆ ಒಳಪಡಬೇಕು. ರಾಜಭವನದ ಆವರಣದೊಳಗೆ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿರುವ ಸ್ಥಳಗಳನ್ನು ಬಿಟ್ಟು ಬೇರೆಡೆಗೆ ಪ್ರವೇಶಿಸುವಂತಿಲ್ಲ.
ಸಾರ್ವಜನಿಕರು ಪ್ರವೇಶದ ಸಂದರ್ಭದಲ್ಲಿ ಮತ್ತು ಪ್ರವೇಶಿಸಿದ ನಂತರ ಭದ್ರತೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ನೀಡುವ ಸಲಹೆ- ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ. ಸಾರ್ವಜನಿಕರು ರಾಜಭವನದ ಆವರಣದೊಳಗೆ ಶಾಂತಿ ಮತ್ತು ನಿಶಬ್ಧ ಕಾಪಾಡುವ ಮೂಲಕ ಸಹಕರಿಸಬೇಕಾಗಿ ತಿಳಿಸಲಾಗಿದೆ.
ಸಾರ್ವಜನಿಕರು ರಾಜಭವನದ ಪ್ರವೇಶದ ಸಂದರ್ಭದಲ್ಲಿ ಮೊಬೈಲ್, ಲ್ಯಾಪ್ಟಾಪ್, ಕ್ಯಾಮೆರಾಗಳು ಮತ್ತು ಎಲ್ಲಾ ರೀತಿಯ ಎಲೆಕ್ಟಿಕಲ್ ಉಪಕರಣಗಳನ್ನು ಕೊಂಡೊಯ್ಯುವಂತಿಲ್ಲ. ಇದೆಲ್ಲವೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಚೂಪಾದ ವಸ್ತುಗಳು ಮತ್ತು ಎಲ್ಲ ರೀತಿಯ ಮೆಟಲ್ ವಸ್ತುಗಳು, ತಿಂಡಿ-ತಿನಿಸುಗಳು, ಪ್ಲಾಸ್ಟಿಕ್ ವಸ್ತುಗಳು, ಬೆಂಕಿಪೊಟ್ಟಣ, ಲೈಟರ್, ಬ್ಯಾಗ್, ಕೈ ಚೀಲಗಳು, ತಂಬಾಕು ಮತ್ತು ಮಧ್ಯಪಾನ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮತ್ತು ಸಾರ್ವಜನಿಕರ ಎಲ್ಲಾ ರೀತಿಯ ವಾಹನಗಳನ್ನು ರಾಜಭವನದ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.