ತುಮಕೂರು ಮಹಾನಗರ ಪಾಲಿಕೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ!

20Tmk_Corona_Palike_02
Published on

ತುಮಕೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ತುರ್ತು ಸೇವೆಗಳಾದ ಕುಡಿಯವ ನೀರು ಹಾಗೂ ಸ್ವಚ್ಛತೆಗೆ ಸಂಬಂಧಿಸಿದಂತೆ ಸಹಾಯವಾಣಿ ಮೂಲಕ ಸೇವೆ ಪಡೆಯಬಹುದು. ಅನಿವಾರ್ಯ ಇದ್ದಲ್ಲಿ ಪಾಲಿಕೆಗೆ ಭೇಟಿ ನೀಡಬಹುದಾಗಿದೆ. ಗುಂಪಿನಲ್ಲಿ ಬರುವುದಕ್ಕೂ ಬ್ರೇಕ್ ಹಾಕಲಾಗಿದೆ. ಇನ್ನೂ ಯಾವುದೇ ವ್ಯಕ್ತಿಯು ಕೆಮ್ಮು, ನೆಗಡಿ, ಜ್ವರ ಇತ್ಯಾದಿಗಳಿಂದ ಬಳಲುತ್ತಿದ್ದಲ್ಲಿ ಅಂತಹವರಿಗೆ ಪ್ರವೇಶ ನಿಷೇಧಿಸಲಾಗಿದೆ.

ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ: ಪಾಲಿಕೆಗೆ ತುರ್ತಾಗಿ ಬರುವ ಸಂದರ್ಭ ಒದಗಿ ಬಂದಲ್ಲಿ ಮುಂಜಾಗ್ರತಾ ಕ್ರಮಗಳಾದ ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಬಳಸಬೇಕು. ಸಾರ್ವಜನಿಕರು ಕೆಲಸ ಮುಗಿದ ನಂತರ ತುರ್ತಾಗಿ ಕಚೇರಿಯಿಂದ ನಿರ್ಗಮಿಸುವಂತೆ ಪಾಲಿಕೆ ಆಯುಕ್ತ ಟಿ.ಭೂಬಾಲನ್ ತಿಳಿಸಿದ್ದಾರೆ.

ಸಾರ್ವಜನಿಕರು ಪಾಲಿಕೆಗೆ ಬರಲು ಸಂಜೆ 4 ರಿಂದ 5.30 ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ನಿಯಮವು ತತ್‌ಕ್ಷಣದಿಂದಲೇ ಜಾರಿಯಲ್ಲಿದ್ದು, ಮುಂದಿನ ಆದೇಶದವರೆಗೂ ಚಾಲ್ತಿಯಲ್ಲಿರುತ್ತದೆ. ಸಾರ್ವಜನಿಕರು ಸಹಕರಿಸಿ ಕರೊನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.

ರೈಲ್ವೆ ನಿಲ್ದಾಣದಲ್ಲೂ ಸ್ಕ್ರೀನಿಂಗ್: ನಗರದ ರೈಲ್ವೆ ನಿಲ್ದಾಣದಲ್ಲಿ ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ರೈಲ್ವೆ ಸಿಬ್ಬಂದಿ, ಪ್ರಯಾಣಿಕರಿಗೆ ಆರೋಗ್ಯ ಇಲಾಖೆಯಿಂದ ಇನ್ಫ್ರಾರೆಡ್ ಥರ್ಮಾಮೀಟರ್‌ನಿಂದ ಶುಕ್ರವಾರ ಬೆಳಗಿನಿಂದಲೇ ಸ್ಕ್ರೀನಿಂಗ್ ಮಾಡುವುದನ್ನು ಆರಂಭಿಸಲಾಯಿತು. ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡುವರನ್ನು ಸ್ಕ್ರೀನಿಂಗ್‌ಗೆ ಒಳಪಡಿಸಲಾಯಿತು.

ಮೇಯರ್, ಆಯುಕ್ತರ ಸಿಟಿ ರೌಂಡ್ಸ್: ಎಚ್1 ಎನ್1, ಹಕ್ಕಿಜ್ವರ, ಕಾಲರಾ, ಮಹಾಮಾರಿ ಕರೊನಾ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಸ್ವಚ್ಛತೆಗೆ ಒತ್ತು ಕೊಡಲಾಗಿದ್ದು, ಮೇಯರ್ ಫರಿದಾಬೇಗಂ, ಆಯುಕ್ತ ಟಿ.ಭೂಬಾಲನ್ ನಗರ ಪ್ರದಕ್ಷಿಣೆ ಹಾಕಿದರು.

ಅಶೋಕರಸ್ತೆ, ಜೆಸಿ ರಸ್ತೆ, ಪ್ರಶಾಂತ ಚಿತ್ರಮಂದಿರ ಪಕ್ಕದ ರಸ್ತೆಯಿಂದ ಗುಬ್ಬಿವೀರಣ್ಣ ರಂಗಮಂದಿರದವರೆಗೆ ಪಾದಯಾತ್ರೆಯಲ್ಲಿ ತೆರಳಿದ ಮೇಯರ್, ಆಯುಕ್ತರು ಸಮಸ್ಯೆಗಳನ್ನು ಪರಿಶೀಲಿಸಿದರು. ಗುಬ್ಬಿವೀರಣ್ಣ ರಂಗಮಂದಿರದ ಪಕ್ಕದ ಜಾಗದಲ್ಲಿ ಸುರಿಯಲಾಗಿದ್ದ ಬೆಟ್ಟದಂತಹ ತ್ಯಾಜ್ಯ ರಾಶಿ ಕಂಡು ತಬ್ಬಿಬ್ಬಾದರು. ಸಾರಿಗೆ ಬಸ್ ಡಿಪೋದಲ್ಲಿ ತಾತ್ಕಾಲಿಕವಾಗಿ ಆರಂಭಿಸಿರುವ ಬಸ್ ನಿಲ್ದಾಣದಿಂದ ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಬಸ್‌ಗಳು ಸಂಚರಿಸುವುದರಿಂದ ಧೂಳಮಯವಾಗಿದ್ದು ಈ ಬಗ್ಗೆ ಆಟೋ ಚಾಲಕರು, ಪಾದಚಾರಿಗಳ ದೂರಿನ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳುವ ಭರವಸೆಯನ್ನು ಫರಿದಾಬೇಗಂ ನೀಡಿದರು. ಉಪಮೇಯರ್ ಶಶಿಕಲಾ, ಪಾಲಿಕೆ ಅಧಿಕಾರಿಗಳು ಇದ್ದರು.

ಮಾಸಾಂತ್ಯದವರೆಗೆ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ: ಕರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರದಿಂದ ಮಾರ್ಚ್ 31ರವರೆಗೆ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಹಿಸಬೇಕಾಗಿದೆ. ಸಂತೆ, ಜಾತ್ರೆ, ಸಮಾವೇಶ, ಸಮ್ಮೇಳನ, ಮದುವೆ, ಕ್ರೀಡಾಕೂಟ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಆದೇಶವು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವವರಿಗೆ ಹಾಗೂ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ. ನಿಷೇಧಾಜ್ಞೆ ಉಲ್ಲಂಘಿಸಿದಲ್ಲಿ ಅಂತಹವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ಆದೇಶಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಕರೊನಾ ವದಂತಿ ಸೃಷ್ಟಿಕರ್ತ ಅಭಿಜಿತ್ ಅರೆಸ್ಟ್: ಕರೊನಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿಯಬಿಟ್ಟಿದ್ದ ನಗರದ ಚಿಕ್ಕಪೇಟೆ ಅಮಲ್ದಾರ್ ಗುಂಡಪ್ಪ ಬೀದಿಯ ನಿವಾಸಿ ಕೆ.ವಿ.ಅಭಿಜಿತ್(29)ನನ್ನು ತುಮಕೂರು ನಗರ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಇಂಡೋನೇಷ್ಯಾದಿಂದ ವಾಪಸಾಗಿದ್ದ ಎ.ಅಂಜನ್ ಹಾಗೂ ಅವರ ಪತ್ನಿ ಭವಾನಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದರೂ ದಂಪತಿಗೆ ಕರೊನಾ ಸೋಂಕು ತಗುಲಿದೆ ಎಂದು ಅಭಿಜಿತ್ ವದಂತಿ ಹಬ್ಬಿಸಿದ್ದ. ಎಲ್ಲರ ೆನ್ ಕರೆಗಳಿಂದ ಮಾನಸಿಕವಾಗಿ ನೊಂದಿದ್ದ ಅಂಜನ್ ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ನಗರಠಾಣೆ ಪಿಎಸ್‌ಐ ಎಸ್.ವಿಜಯಲಕ್ಷ್ಮೀ ನೇತೃತ್ವದ ತಂಡ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಸಾರ್ವಜನಿಕರಿಗೆ ಪೊಲೀಸರ ಸೂಚನೆ: ಕೆಲವರು ವಿದೇಶದಿಂದ ವಾಪಸಾಗಿದ್ದು, ಅವರ ಹೆಸರನ್ನು ನಮೂದಿಸಿ ಕರೊನಾ ಸೋಂಕು ತಗುಲಿದೆ ಎಂದು ವದಂತಿ ಹಬ್ಬಿಸುತ್ತಿದ್ದು, ಇಂತಹ ಸುಳ್ಳು ಸುದ್ದಿಗಳನ್ನು ಸಾರ್ವಜನಿಕರು ನಂಬಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಸುಳ್ಳು ಸುದ್ದಿ ಸೃಷ್ಟಿಸುವುದು, ಅದನ್ನು ಶೇರ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಎಚ್ಚರಿಸಿದ್ದಾರೆ.

ಕಾಟಾಚಾರಕ್ಕೆ ಸ್ಕಾೃನರ್ ಹಿಡಿದ ಸಿಬ್ಬಂದಿ!: ತುಮಕೂರು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲು ಗೇಟ್‌ನಲ್ಲಿ ಥರ್ಮೊಸ್ಕಾೃನರ್ ಹಿಡಿದು ಕುಳಿತಿದ್ದ ಸಿಬ್ಬಂದಿ ಶುಕ್ರವಾರ ಕಾಟಾಚಾರಕ್ಕೆ ತೋರಿಸಿ ಪ್ರಯಾಣಿಕರನ್ನು ಕಳುಹಿಸುತ್ತಿದ್ದ ವಿಡಿಯೋ ವೈರಲ್ ಆಗಿದೆ. ದೇಶವೇ ಆತಂಕದ ಸ್ಥಿತಿಯಲ್ಲಿದ್ದರೂ ಸಿಬ್ಬಂದಿ ಬೇಜವಾಬ್ದಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಸಾರ್ವಜನಿಕರ ಆಕ್ರೋಶ ಹಾಗೂ ಆತಂಕಕ್ಕೆ ಕಾರಣವಾಗಿದೆ.

ರಸ್ತೆ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಧೂಳು ಆಗದಂತೆ ಪ್ರತಿನಿತ್ಯ ಈ ರಸ್ತೆಗೆ ನೀರು ಹಾಕಿಸಲಾಗುವುದು. ಗುಬ್ಬಿವೀರಣ್ಣ ರಂಗಮಂದಿರದ ಪಕ್ಕದಲ್ಲಿರುವ ತ್ಯಾಜ್ಯದ ರಾಶಿ ತೆರವುಗೊಳಿಸಲು ಕ್ರಮವಹಿಸಲಾಗುವುದು. ಟಿ.ಭೂಬಾಲನ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net