

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ವಲಯವಾರು ಪಬ್, ಬಾರ್ ರೆಸ್ಟೋರೆಂಟ್‌ಗಳಿಗೆ ಸಂಬಂಧಿಸಿದಂತೆ ಎಂಟೂ ವಲಯಗಳಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಶುಕ್ರವಾರ ತಪಾಸಣೆ ನಡೆಸಿ, ನ್ಯೂನ್ಯತೆಗಳು ಕಂಡುಬಂದಿರುವ ಉದ್ದಿಮೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಇತ್ತೀಚಿಗೆ ಮಡ್ ಪೈಪ್ ಕೆೆಯಲ್ಲಿ ಅಗ್ನಿ ದುರಂತ ಸಂಭವಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪಾಲಿಕೆ ಅಧಿಕಾರಿಗಳು ಪರವಾನಿಗೆ ನಿಯಮಾವಳಿ ಪಾಲಿಸದ ಉದ್ದಿಮೆಗಳನ್ನು ಸ್ಥಳದಲ್ಲೇ ಮುಚ್ಚಿಸಿದ್ದಾರೆ. ಇಂತಹ 12 ಮಳಿಗೆಗಳಿಗೆ ನೋಟಿಸ್ ಜಾರಿಗೊಳಿಸಿ ಸ್ಥಳದಲ್ಲೇ ಬಂದ್ ಮಾಡಿ ಬಿಸಿ ಮುಟ್ಟಿಸಿದ್ದಾರೆ.
ಗುರುವಾರ ಪ್ರಕರಣ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಡಾ. ಜಿ.ಪರಮೇಶ್ವರ ಹಾಗೂ ಡಿಜಿಪಿ ಕಮಲ್ ಪಂತ್ ಅವರು ಇಂತಹ ಘಟನೆಗಳು ಮರುಕಳಿಸದಿರಲು ತಪ್ಪು ಮಾಡಿರುವ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದರು. ಜತೆಗೆ ಸಾರ್ವಜನಿಕರು ಕೂಡ ಪದೇ ಪದೆ ದೂರು ನೀಡಿ ಕ್ರಮ ತೆಗೆದುಕೊಳ್ಳುವಂತೆ ಒತ್ತಡ ಹೇರಿದ್ದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
1,118 ಉದ್ದಿಮೆಗಳಿಗೆ ಪರವಾನಿಗೆ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಸ್ತುತ ಒಟ್ಟು 1,118 ಉದ್ದಿಮೆಗಳಿಗೆ ಪರವಾನಿಗೆ ನೀಡಲಾಗಿದೆ. ಈ ಪೈಕಿ ಶುಕ್ರವಾರ 232 ಉದ್ದಿಮೆಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ 86 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಿ ಉಳಿದ 12 ಉದ್ದಿಮೆಗಳನ್ನು ಮುಚ್ಚಲಾಗಿರುತ್ತದೆ. ಬಾಕಿ ಉಳಿದಿರುವ ಉದ್ದಿಮೆಗಳನ್ನು ಪರಿಶೀಲಿಸುವ ಕಾರ್ಯ ಮುಂದುವರಿಯಲಿದೆ ಎಂದು ಪಾಲಿಕೆಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ. ಬಾಲಸುಂದರ್ ತಿಳಿಸಿದ್ದಾರೆ.