ಸೆ.1ರಿಂದ ಪಬ್, ಬಾರ್, ಕ್ಲಬ್ ಓಪನ್, ಅಬಕಾರಿ ಸಚಿವ ಎಚ್. ನಾಗೇಶ್ ಸುಳಿವು

25 Nela ph 02 Minister H.Nagesh Visit
Published on

ನೆಲಮಂಗಲ: ರಾಜ್ಯದಲ್ಲಿ ಸೆ.1ರಿಂದ ಪಬ್, ಬಾರ್ ಮತ್ತು ಕ್ಲಬ್‌ಗಳು ಪುನರಾರಂಭಗೊಳ್ಳುವ ಸಾಧ್ಯತೆ ಬಗ್ಗೆ ಅಬಕಾರಿ ಸಚಿವ ಎಚ್. ನಾಗೇಶ್ ಈ ಸುಳಿವು ನೀಡಿದ್ದಾರೆ.

ನೆಲಮಂಗಲ ನಗರಸಭೆ ವ್ಯಾಪ್ತಿಯಲ್ಲಿರುವ ಯುನೈಟೆಡ್ ಬ್ರಿವರೀಸ್ ಆ್ಯಂಡ್ ಡಿಸ್ಟಲರೀಸ್‌ಗೆ ಮಂಗಳವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು. ಪಬ್, ಬಾರ್ ಮತ್ತು ಕ್ಲಬ್‌ಗಳನ್ನು ಪುನರಾರಂಭಿಸಲು ಅನುಮತಿ ನೀಡುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಈ ಕುರಿತು ಸಾಕಷ್ಟು ಬಾರಿ ಚರ್ಚಿಸಲಾಗಿದೆ. ಆದ್ದರಿಂದ, ಇವುಗಳನ್ನು ತೆರೆಯಲು ಅವರು ಶೀಘ್ರವೇ ಅನುಮತಿ ನೀಡುವ ಸಾಧ್ಯತೆ ಇರುವುದಾಗಿ ತಿಳಿಸಿದರು.

ಡಿಸ್ಟಲರಿಗಳಲ್ಲಿ ಕಾರ್ಮಿಕರ ಸುರಕ್ಷತೆಗೆ ಕೈಗೊಳ್ಳಲಾಗಿರುವ ಕ್ರಮಗಳು, ಅಲ್ಲಿನ ಉತ್ಪಾದನಾ ಗುಣಮಟ್ಟ, ಸ್ವಚ್ಛತಾ ನಿಯಮಗಳ ಪಾಲನೆ ಸೇರಿ ಹಲವು ಅಂಶಗಳ ಕುರಿತು ಪರಿಶೀಲನೆ ನಡೆಸಲು ಯುನೈಟೆಡ್ ಬ್ರಿವರೀಸ್ ಆ್ಯಂಡ್ ಡಿಸ್ಟಲರೀಸ್‌ಗೆ ಭೇಟಿ ನೀಡಿದ್ದಾಗಿ ತಿಳಿಸಿದರು.

ಶೇ.50 ಮದ್ಯ ಉತ್ಪಾದನೆ: ಲಾಕ್‌ಡೌನ್ ಅವಧಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಜತೆಗೆ ಮದ್ಯ ಉತ್ಪಾದನೆಯನ್ನೂ ಸ್ಥಗಿತಗೊಳಿಸಲಾಗಿತ್ತು. ಆದರೆ, ಮೇ ಮೊದಲ ವಾರದಲ್ಲಿ ಮದ್ಯ ಮಾರಾಟ ಪುನರಾರಂಭಕ್ಕೆ ರಾಜ್ಯ ಸರ್ಕಾರ ಅನುಮತಿಸಿದ ನಂತರದಲ್ಲಿ ಡಿಸ್ಟಲರೀಸ್ ಅನ್ನು ತೆರೆಯಲು ಅನುಮತಿ ನೀಡಲಾಗಿತ್ತು ಎಂದು ಹೇಳಿದರು.

ರಾಜ್ಯದಲ್ಲಿ ಸದ್ಯ 27 ಡಿಸ್ಟಲರಿಗಳು ಕಾರ್ಯ ನಿರ್ವಹಿಸುತ್ತಿವೆ. ಕಡಿಮೆ ಕಾರ್ಮಿಕರನ್ನು ಬಳಸಿಕೊಂಡು ಮೂರು ಪಾಳಿಗಳಲ್ಲಿ ಮದ್ಯ ಉತ್ಪಾದಿಸಲಾಗುತ್ತಿದೆ. ಮದ್ಯದ ಉತ್ಪಾದನೆ ಒಟ್ಟಾರೆ ಶೇ.50 ಇದೆ ಎಂದರು.

ಅಬಕಾರಿ ಡಿವೈಎಸ್‌ಪಿ ಎ.ವಿ. ಗಿರೀಶ್, ತಹಸೀಲ್ದಾರ್ ಎಂ. ಶ್ರೀನಿವಾಸ್, ಯುನೈಟೆಡ್ ಬ್ರಿವರೀಸ್ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಶಂಕರ್‌ರಾಮಮೂರ್ತಿ ಮತ್ತಿತರರು ಇದ್ದರು.

3 ಸಾವಿರ ಕೋಟಿ ರೂ. ನಷ್ಟ: ಕೋವಿಡ್ ಲಾಕ್‌ಡೌನ್‌ನಿಂದಾಗಿ ಅಬಕಾರಿ ಇಲಾಖೆಗೆ ಒಟ್ಟು 3 ಸಾವಿರ ಕೋಟಿ ರೂ. ನಷ್ಟವಾಗಿದೆ. ಮದ್ಯ ಮಾರಾಟ ಪುನರಾರಂಭಗೊಂಡ ನಂತರದಲ್ಲಿ ಈ ನಷ್ಟ ಪ್ರಮಾಣ 2 ಸಾವಿರ ಕೋಟಿ ರೂ.ಗೆ ಇಳಿಕೆಯಾಗಿದೆ. ಇನ್ನು 8 ತಿಂಗಳಲ್ಲಿ ಈ ನಷ್ಟವನ್ನು ಸರಿದೂಗಿಸುವ ಜತೆಗೆ 25 ಸಾವಿರ ಕೋಟಿ ರೂ. ಗಳಿಕೆಯ ಗುರಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಾರ್, ಪಬ್ ಮತ್ತು ಕ್ಲಬ್ ಪುನರಾರಂಭಗೊಂಡ ನಂತರದಲ್ಲಿ ಮದ್ಯಕ್ಕೆ ಹೆಚ್ಚಿನ ಬೇಡಿಕೆ ಬರುವ ಜತೆಗೆ ಸರ್ಕಾರದ ಆದಾಯವೂ ಹೆಚ್ಚಾಗಲಿದೆ ಎಂದು ಸಚಿವ ಎಚ್. ನಾಗೇಶ್ ಹೇಳಿದರು.

ರಾಜ್ಯದಲ್ಲಿ ಸದ್ಯಕ್ಕೆ ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ನೀಡುವುದಿಲ್ಲ. ದೇಶದ ಹಲವು ರಾಜ್ಯಗಳಲ್ಲಿ ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರ ಸಾಧಕ-ಬಾಧಕಗಳ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ರಾಜ್ಯದ ಜನತೆಯೂ ಒಪ್ಪಿಕೊಂಡಲ್ಲಿ ಮಾತ್ರ ಈ ವ್ಯವಸ್ಥೆ ಜಾರಿಗೆ ಬರಲಿದೆ. ಎಚ್. ನಾಗೇಶ್, ಅಬಕಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net