

ತುಮಕೂರು: ಕರೊನಾ ಕಾರಣ ಕೊನೇ ಕ್ಷಣದಲ್ಲಿ ಮುಂದೂಡಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಜೂ.18ರಂದು ನಡೆಯಲಿದ್ದು, ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಿಲ್ಲೆಯ 14,078 ವಿದ್ಯಾರ್ಥಿನಿಯರು ಹಾಗೂ 10,922 ವಿದ್ಯಾರ್ಥಿಗಳು ಸೇರಿ ಒಟ್ಟು 25,050 ವಿದ್ಯಾರ್ಥಿಗಳು ಇಂಗ್ಲಿಷ್ ಪರೀಕ್ಷೆ ಬರೆಯಲಿದ್ದು, ಜಿಲ್ಲೆಯಲ್ಲಿ ಒಟ್ಟು 34 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಈಗಾಗಲೇ ಪರೀಕ್ಷಾ ಕೇಂದ್ರದ ಕೊಠಡಿಗಳ ಸ್ಯಾನಿಟೈಜ್ ಕಾರ್ಯ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯದ ಜತೆಗೆ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ದೈಹಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ಪ್ರತಿ ಪರೀಕ್ಷಾ ಕೊಠಡಿಗಳಲ್ಲಿ 12 ಹಾಗೂ ದೊಡ್ಡ ಕೊಠಡಿಗಳಾದಲ್ಲಿ 24 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹಂಚಿಕೆ ಮಾಡಲಾಗಿದೆ.
ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರಸ್ತುತ ಬೇರೆ ಜಿಲ್ಲೆಯಲ್ಲಿ ವಾಸವಿರುವ 332 ವಿದ್ಯಾರ್ಥಿಗಳು ಆಯಾ ಜಿಲ್ಲೆಯಲ್ಲಿಯೇ ಪರೀಕ್ಷೆ ಬರೆಯಲಿದ್ದಾರೆ. ಅದೇರೀತಿ ಬೇರೆ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರಸ್ತುತ ತುಮಕೂರು ಜಿಲ್ಲೆಯಲ್ಲಿ ವಾಸವಿರುವ 690 ವಿದ್ಯಾರ್ಥಿಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವ್ಯಾಸಂಗ ಮಾಡಿ ಪ್ರಸ್ತುತ ಬೇರೆ ಬೇರೆ ರಾಜ್ಯಗಳಲ್ಲಿ ವಾಸವಿರುವ 5 ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. ಪರೀಕ್ಷಾ ಕೇಂದ್ರ ಬದಲಾವಣೆಗೊಂಡ ವಿದ್ಯಾರ್ಥಿಗಳು ಮೂಲಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಬಯಸಿದರೆ ಹಳೆಯ ಪ್ರವೇಶ ಪತ್ರಗಳನ್ನು ಹಾಜರುಪಡಿಸಿದರೆ ಅಲ್ಲಿಯೇ ಅವಕಾಶ ಮಾಡಿಕೊಡಲಾಗುವುದು. ಬದಲಾವಣೆಗೊಂಡ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವವರು ವೆಬ್‌ಸೈಟ್‌ನಿಂದ ಪ್ರವೇಶಪತ್ರ ಡೌನ್‌ಲೌಡ್ ಮಾಡಿಕೊಳ್ಳಬೇಕು.
ಸಾರಿಗೆ ವ್ಯವಸ್ಥೆ: ವಾಹನ ಸೌಲಭ್ಯವಿಲ್ಲದೆ ಹೋಬಳಿ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಿಂದ ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಪಿಯು ವಿದ್ಯಾರ್ಥಿ ಗಳು ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಪಾಲಕರು ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಸಮಸ್ಯೆಗಳಿದ್ದರೆ ಪರೀಕ್ಷಾ ಸಹಾಯವಾಣಿ ಸಂಖ್ಯೆ: 0816-2275213ನ್ನು ಸಂಪರ್ಕಿಸಬಹುದು. ಲಲಿತಾಕುಮಾರಿ, ಡಿಡಿಪಿಯು