

ತುಮಕೂರು: ದ್ವಿತೀಯ ಪಿಯುಸಿ ಪರೀಕ್ಷೆ ಬುಧವಾರ ಆರಂಭವಾಗಿದ್ದು, ಮೊದಲದಿನ ಸುಸೂತ್ರವಾಗಿ ನಡೆಯಿತು. ಜಿಲ್ಲೆಯಲ್ಲಿ ಯಾವುದೇ ಡಿಬಾರ್ ವರದಿ ಆಗಿಲ್ಲ. ಜಿಲ್ಲೆಯ 34 ಪರೀಕ್ಷಾ ಕೇಂದ್ರಗಳಲ್ಲಿ ಭೌತಶಾಸ್ತ್ರ-7,744, ಇತಿಹಾಸ -11,641 ಹಾಗೂ ಬೇಸಿಕ್ ಮ್ಯಾಥ್ಸ್ -254 ವಿದ್ಯಾರ್ಥಿಗಳು ಬರೆದಿದ್ದು, ಒಟ್ಟು 1067 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಯಾವುದೇ ಡಿಬಾರ್ ವರದಿ ಆಗಿಲ್ಲ.
ಬೆಳಗ್ಗೆ 10.15ಕ್ಕೆ ಪರೀಕ್ಷೆಗಳು ಜಿಲ್ಲೆಯ 34 ಪರೀಕ್ಷಾ ಕೇಂದ್ರಗಳಲ್ಲಿ ಆರಂಭವಾಗಿದ್ದು, ಇತಿಹಾಸ ವಿಷಯದಲ್ಲಿ 12,553 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದು, 11,641 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 912 ವಿದ್ಯಾರ್ಥಿಗಳು ಗೈರಾಗಿದ್ದರು. ಇನ್ನೂ ಭೌತಶಾಸ್ತ್ರದಲ್ಲಿ 7,895 ವಿದ್ಯಾರ್ಥಿಗಳು ನೊಂದಣಿ ಮಾಡಿಸಿದ್ದು 7,744 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರದರು. 151 ವಿದ್ಯಾರ್ಥಿಗಳು ಗೈರಾಗಿದ್ದರು. ಬೇಸಿಕ್ ಮ್ಯಾಥ್ಸ್ ವಿಷಯದಲ್ಲಿ 258 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದು 254 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 4 ವಿದ್ಯಾರ್ಥಿಗಳು ಗೈರಾಗಿದ್ದರು.
ನಿಷೇಧಾಜ್ಞೆ: ಜಿಲ್ಲೆಯಾದ್ಯಂತ 34 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿತ್ತು. ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಬೆಳಗ್ಗೆ 9 ರಿಂದ ಸಂಜೆ 5.30 ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ಯಾವುದೇ ರೀತಿಯಲ್ಲಿ ನಕಲು, ಅಕ್ರಮ ನಡೆಯದಂತೆ ಪರೀಕ್ಷಾ ಕೇಂದ್ರದ ಹತ್ತಿರದ ಜೆರಾಕ್ಸ್, ಸೈಬರ್ ಸೆಂಟರ್‌ಗಳನ್ನು ಸಹ ಮುಚ್ಚಿಸಲಾಗಿತ್ತು.
ಪಾಲಕರ ಧಾವಂತ !: ಬುಧವಾರ ಪರೀಕ್ಷೆ ಮೊದಲ ದಿನವಾದ್ದರಿಂದ ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗಿಂತ ಪಾಲಕರು ಧಾವಂತ ಎದ್ದುಕಾಣುತ್ತಿತ್ತು. ಮಕ್ಕಳನ್ನು ಪಾಲಕರೇ ವಾಹನಗಳಲ್ಲಿ ಕರೆತಂದು ಪರೀಕ್ಷೆ ಆರಂಭವವಾಗುವವರೆಗೆ ಜತೆಯಲ್ಲಿ ಇದ್ದು ಕಳುಹಿಸಿದರಲ್ಲದೆ, ಪರೀಕ್ಷೆ ಮುಗಿಯುತ್ತಿದ್ದಂತೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪೋಸ್ಟ್ ಆಫೀಸ್‌ನಲ್ಲಿ ಗೊಂದಲ: ತುಮಕೂರು ಖಜಾನೆಯಿಂದ ಒಟ್ಟು 24 ಕೇಂದ್ರಗಳಿಗೆ, 8 ಮಾರ್ಗಗಳ ಮೂಲಕ ಹಾಗೂ ಮಧುಗಿರಿ ಖಜಾನೆಯಿಂದ 10 ಕೇಂದ್ರಗಳಿಗೆ 4 ಮಾರ್ಗಗಳ ಮೂಲಕ ಪ್ರಶ್ನೆ ಪತ್ರಿಕೆ ರವಾನಿಸಲಾಯಿತು. ಯಾವುದೇ ಗೊಂದಲಗಳಿಲ್ಲದೆ ಪರೀಕ್ಷೆ ನಡೆಯಿತು. ಬಯೋಮೆಟ್ರಿಕ್ ವ್ಯವಸ್ಥೆ ಮಾಡಲಾಗಿತ್ತು. ಉತ್ತರ ಪತ್ರಿಕೆಗಳನ್ನು ಪೋಸ್ಟ್ ಆಫೀಸ್ ಮೂಲಕ ರವಾನಿಸುವ ಸಂದರ್ಭದಲ್ಲಿ ಸ್ವಲ್ಪ ಗೊಂದಲ ಉಂಟಾಗಿದ್ದು ಸಮಯವನ್ನು ವಿಸ್ತರಿಸಲು ಸೂಚಿಸಲಾಗಿದೆ. ಪ್ರಾಚಾರ್ಯ ಕೆ.ಎಸ್.ಸಿದ್ದಲಿಂಗಪ್ಪ ಇದ್ದರು.