

ಶ್ರೀರಂಗಪಟ್ಟಣ: ಮುಸ್ಲಿಂ ವಸತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿವರೆಗೂ ತರಗತಿಗಳು ನಡೆಯುತ್ತಿದ್ದು, ಇನ್ಮುಂದೆ ಪಿಯುಸಿ ತರಗತಿಗಳನ್ನೂ ಪ್ರಾರಂಭಿಸಲಾಗುತ್ತಿದೆ ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಹೇಳಿದರು.
ಪಟ್ಟಣದ ಅಲ್ಪಸಂಖ್ಯಾತರ ಇಲಾಖೆಯ ಮುಸ್ಲಿಂ ವಸತಿ ಶಾಲೆ ಆವರಣದಲ್ಲಿ ಶುಕ್ರವಾರ 8 ಕೋಟಿ ರೂ. ವೆಚ್ಚದಲ್ಲಿ ಪಿಯು ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕಾಲೇಜು ಪ್ರಾರಂಭಕ್ಕೆ ಅವಶ್ಯವಿರುವ ಕಟ್ಟಡವನ್ನು ಮೂಲಸೌಲಭ್ಯಗಳೊಂದಿಗೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಪಟ್ಟಣದಲ್ಲಿ 6ರಿಂದ 10ನೇ ತರಗತಿವರೆಗಿದ್ದ ಮುಸ್ಲಿಂ ವಸತಿ ಶಾಲೆಯನ್ನು ಅಭಿವೃದ್ಧಿಪಡಿಸಿ ಮೇಲ್ದರ್ಜೆಗೇರಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಅಲ್ಪಸಂಖ್ಯಾತ ಇಲಾಖೆ ಸಚಿವ ಜಮೀರ್ ಅಹಮದ್ ಬಳಿ ಮನವಿ ಮಾಡಲಾಗಿದ್ದು, ಅವರ ಸ್ಪಂದನೆಯಿಂದ ವಿದ್ಯಾರ್ಥಿಗಳಿಗೆ ಅಗತ್ಯ ಮೂಲ ಸೌಲಭ್ಯಗಳೊಂದಿಗೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳ ವಿಚಾರದಲ್ಲಿ ದೃಢ ನಿಲುವು ತೋರುವ ಜತೆಗೆ ಎಲ್ಲ ಧರ್ಮಗಳನ್ನು ಒಟ್ಟಿಗೆ ಕೊಂಡೊಯ್ಯಲು ಸದಾ ವಿಶ್ವಾಸ ಹಾಗೂ ಆಸಕ್ತಿ ತೋರುವುದು ಸಂತಸದಾಯಕ ಎಂದರು.
ಮನ್ಮುಲ್ ಚುನಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರ ದ್ವೇಷ ನೀತಿ ಅನುಸರಿಸುತ್ತಿದೆ ಎಂಬ ವಿಚಾರಕ್ಕೆ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಪ್ರತಿಕ್ರಿಯಿಸಿ, ಈಗ ಇಲ್ಲದ ಆರೋಪ ಮಾಡಿ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ಜಿಲ್ಲೆಯ ಪ್ರತಿಪಕ್ಷದ ನಾಯಕರು ಹಿಂದೆ ತಮ್ಮ ಸರ್ಕಾರ ಆಡಳಿತದಲ್ಲಿದ್ದ ಅವಧಿಯಲ್ಲಿ ಮನ್ಮುಲ್‌ನಲ್ಲಿ ಅಧಿಕಾರ ನಡೆಸಿದ್ದ ತಮ್ಮದೇ ಮುಖಂಡರು ಮಾಡಿರುವ ಹಾಲಿಗೆ ನೀರು ಮಿಶ್ರಣದ ಹಗರಣಗಳ ಬಗ್ಗೆ ತುಟಿಬಿಚ್ಚಿ ವಿರೋಧಿಸಲಿಲ್ಲ, ಆ ಪ್ರಕರಣದ ತನಿಖೆ ಏನಾಯಿತು. ಯಾರ‌್ಯಾರು ಭಾಗಿಯಾಗಿದ್ದರು ಎಂಬುದು ಈವರೆಗೆ ತಿಳಿದಿಲ್ಲ ಎಂದು ಹೇಳಿದರು.
ಆಗ ಮನ್ಮುಲ್ ಚುನಾವಣೆ ಸಮಯದಲ್ಲಿ ನಮ್ಮ ಎಷ್ಟೋ ಸದಸ್ಯರಿಗೆ ಒಂದು ದಿನ, ಒಂದು ವಾರದ ಮಟ್ಟಿಗೆ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶವೇ ಸಿಗದಂತೆ ಅನರ್ಹಗೊಳಿಸಿದ ಪ್ರಕರಣ ಅವರಿಗೆ ಜ್ಞಾಪಕ ಇರಬೇಕು. ಹೀಗಾಗಿ ಹಿಂದೆ ಅವರು ಏನು ಮಾಡಿದ್ದರು, ಯಾವ ರೀತಿ ನಮ್ಮ ವಿರುದ್ಧ ನಡೆದುಕೊಂಡಿದ್ದರು. ಅದಕ್ಕೆ ಪ್ರತಿಯಾಗಿ ನಾವೂ ಈಗ ಅದನ್ನೇ ಅನುಸರಿಸುತ್ತಿದ್ದೇವೆ ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರ ವಿರುದ್ದ ಕಿಡಿಕಾರಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ನಂದೀಶ್, ಪುರಸಭಾ ಸದಸ್ಯರಾದ ಎಂ.ಎಲ್.ದಿನೇಶ್, ದಯಾನಂದ್, ಎಸ್.ನಂದೀಶ್, ರಾಧಾಶ್ರೀ ಕಂಠು, ಮುಖ್ಯಾಧಿಕಾರಿ ಎಂ.ರಾಜಣ್ಣ, ತಾಲೂಕು ಪಂಚಾಯಿತಿ ಇಒ ವೇಣು, ಬಿಇಒ ಆರ್.ಪಿ.ಮಹೇಶ್, ವಸತಿ ಶಾಲೆ ಪ್ರಾಂಶುಪಾಲೆ ಶೋಭಾ, ದೈಹಿಕ ಶಿಕ್ಷಕ ಗೌರಿಶಂಕರ್, ಮುಸ್ಲಿಂ ಮುಖಂಡರಾದ ಅಬ್ದುಲ್ ರವೂಫ್, ಗುಲಾಮ್ ದಸ್ತಗಿರ್, ಸೈಯದ್ ಜುಲ್ಫೀಕಾರ್(ಕೋಳಿ ಸಾಬ್), ಸೈಯದ್ ಇಫ್ತಿಕಾರ್, ಇಮ್ರಾನ್, ಇರ್ಫಾನ್ ಮುಖಂಡರಾದ ಸೋಮಸುಂದರ್, ಚೆನ್ನಪ್ಪ, ಟಿ.ಕೃಷ್ಣ, ನಾಗಣ್ಣ ಇತರರು ಇದ್ದರು.