ಪಿಯು ಬೋರ್ಡ್ ಪರೀಕ್ಷೆಗೆ ಆಕ್ರೋಶ: ಬಳ್ಳಾರಿಯಲ್ಲಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

Ballari AIDSO Protest
ಬಳ್ಳಾರಿಯ ಡಿಸಿ ಕಚೇರಿ ಎದುರು ಎಐಡಿಎಸ್‌ಒ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
Published on

ಬಳ್ಳಾರಿ: ದ್ವಿತೀಯ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆಯನ್ನು ಬೋರ್ಡ್ ಎಕ್ಸಾಂ ಆಗಿ ನಡೆಸುವ ಸರ್ಕಾರದ ಆದೇಶ ಖಂಡಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಮಂಗಳವಾರ ನಗರದ ಡಿಸಿ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಗುರಳ್ಳಿ ರಾಜ ಮಾತಾನಾಡಿ, ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯು ಮಧ್ಯ ವಾರ್ಷಿಕ ಪರೀಕ್ಷೆ-2021ರ ಮರು ವಿನ್ಯಾಸದ ಕುರಿತು ಸುತ್ತೋಲೆ ಹೊರಡಿಸಿದೆ. ಇದರ ಪ್ರಕಾರ ಮಧ್ಯ ವಾರ್ಷಿಕ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆಯಾಗಿ ನಡೆಸುವುದಲ್ಲದೆ ಪ್ರಶ್ನೆಪತ್ರಿಕೆಗಳನ್ನು ಕೇಂದ್ರ ಕಚೇರಿಯಿಂದ ರವಾನಿಸಲಾಗುತ್ತದೆ. ನ.29ರಿಂದ ಪರೀಕ್ಷೆ ನಡೆಯಲಿದೆ ಎಂದು ತಿಳಿಸಲಾಗಿದೆ. ಹೀಗಾಗಿ, ಕೇವಲ 15 ದಿನಗಳಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಏಕಾಏಕಿ ಬೋರ್ಡ್ ಪರೀಕ್ಷೆ ಎದುರಿಸಲು ಹೇಗೆ ಸಾಧ್ಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪಾಧ್ಯಕ್ಷೆ ಜೆ.ಸೌಮ್ಯಾ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಭೌತಿಕ ತರಗತಿಗಳು ಆರಂಭವಾಗಿದ್ದೇ ಆಗಸ್ಟ್ ಮೂರನೇ ವಾರದಲ್ಲಿ. ರಾಜ್ಯದ ಹಲವು ಕಾಲೇಜುಗಳಲ್ಲಿ ಪಠ್ಯಕ್ರಮ ಪೂರ್ಣಗೊಂಡಿಲ್ಲ, ಪರೀಕ್ಷೆಗೆ ಸಮರ್ಪಕವಾದ ತಯಾರಿ ನಡೆಸಲು ಸಾಧ್ಯವಾಗಿಲ್ಲ. ಬೋರ್ಡ್ ಪರೀಕ್ಷೆ ರೀತಿ ನಡೆಯುತ್ತದೆ ಎಂಬ ಹಠಾತ್ ನಿರ್ಧಾರ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪಾಲಕರಲ್ಲಿ ಆತಂಕ ಸೃಷ್ಟಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಆದೇಶ ಹಿಂಪಡೆಯಬೇಕುಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net