ಪಂ. ಪುಟ್ಟರಾಜರ ಸಂಗೀತ ಕ್ಷೇತ್ರದ ಸೇವೆ ಸ್ಮರಣೀಯ

Pt. Putrajaya's service in the field of music is memorable
Published on

ಹಾನಗಲ್ಲ: ಅಂಧ-ಅನಾಥರ ಬಾಳಿಗೆ ಬೆಳಕಾಗಿದ್ದ ಲಿಂ.ಕುಮಾರ ಶಿವಯೋಗಿಗಳ ಎರಡು ಕಣ್ಣುಗಳೇ ಪಂ. ಪಂಚಾಕ್ಷರರು ಮತ್ತು ಪಂ.ಪುಟ್ಟರಾಜ ಗವಾಯಿಗಳು. ಇವರಿಬ್ಬರು ದೇಶಾದ್ಯಂತ ಸಂಗೀತ ಕಲಾವಿದರನ್ನು ಹುಟ್ಟು ಹಾಕಿದ್ದಾರೆ ಎಂದು ಅಕ್ಕಿಆಲೂರು ವಿರಕ್ತಮಠದ ಶಿವಬಸವ ಸ್ವಾಮಿಗಳು ಹೇಳಿದರು.

ತಾಲೂಕಿನ ಶ್ಯಾಡಗುಪ್ಪಿಯಲ್ಲಿ ಗ್ರಾಮೀಣ ಚಾರಿಟೇಬಲ್ ಟ್ರಸ್ಟ್, ಗುರು ಪುಟ್ಟರಾಜ ಮಹಿಳಾ ಸೇವಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಪಂ.ಡಾ.ಪುಟ್ಟರಾಜ ಕವಿ ಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವ, ಸಾಧಕರ ಸನ್ಮಾನ, ಸಂಗೀತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪಂ.ಪುಟ್ಟರಾಜ ಗವಾಯಿಗಳು ಸಂಗೀತ ಕ್ಷೇತ್ರದ ಮಾಂತ್ರಿಕರಾಗಿದ್ದರು. ಹಲವು ವಾದ್ಯಗಳನ್ನು ನುಡಿಸುತ್ತಿದ್ದರು. ಗದಗಿನ ಪುಣ್ಯಾಶ್ರಮದಲ್ಲಿ ಸಂಗೀತ ಶಾಲೆಯ ಮೂಲಕ ಸಾವಿರಾರು ಮಕ್ಕಳಿಗೆ ಬದುಕಿನ ದಾರಿತೋರಿದ ಮಹಾತ್ಮರು. ಪುಟ್ಟರಾಜರ ಸಂಗೀತ ಕ್ಷೇತ್ರದ ಸೇವೆ ಸ್ಮರಣೀಯವಾಗಿದೆ ಎಂದರು.

ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಸ್.ಎಸ್. ಮೂರಮಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಹೊಸಮನಿ, ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಕೋಳೂರ, ಕಲಾವಿದರಾದ ಶಿವಪ್ಪ ಬ್ಯಾತನಾಳ, ಷಣ್ಮುಖಯ್ಯ ಹಿರೇಮಠ, ಚನ್ನವೀರಯ್ಯ ಹಿರೇಮಠ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶೇಷಗಿರಿ ಕಲಾತಂಡದ ಸಿದ್ದಪ್ಪ ರೊಟ್ಟಿ ಹಾಗೂ ರಂಗಭೂಮಿ ಕಲಾವಿದ ಬಾಲಚಂದ್ರ ಅಂಬಿಗೇರ ಅವರನ್ನು ಸನ್ಮಾನಿಸಲಾಯಿತು. ಸೋಮಯ್ಯ ಗವಾಯಿಗಳು ಬೆಳೆಬಾಳ ಅವರಿಂದ ಸಂಗೀತ ಸೇವೆ ನಡೆಯಿತು. ನಂದೀಶ ಮುಗದೂರ ತಬಲಾ ಸಾಥ್, ಷಣ್ಮುಖಯ್ಯ ಹಿರೇಮಠ ವಾಯಲಿನ್ ಸೇವೆ ನೀಡಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ರಾಮಣ್ಣ ಭಜಂತ್ರಿ ಅವರಿಂದ ಶಹನಾಯಿ ಪ್ರಸ್ತುತಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net