

ಮೈಸೂರು: ಸಂಗೀತ ರಸಿಕರ ಮೆಚ್ಚುಗೆ ಗಳಿಸಿರುವ ಪಂ.ಪ್ರವೀಣ್ ಗೋಡ್ಖಿಂಡಿ ಅವರು ನ.27 ರಂದು ಸಾಂಸ್ಕೃತಿಕ ನಗರಿಯಲ್ಲಿ ಸಂಗೀತದ ಕಂಪು ಚೆಲ್ಲಲಿದ್ದಾರೆ.
ಅಂದು ಸಂಜೆ 6 ಗಂಟೆಗೆ ಬೆಳದಿಂಗಳ ಸಂಗೀತ-261 ರ ಅಂಗವಾಗಿ ಚಾಮುಂಡಿಬೆಟ್ಟದ ತಪ್ಪಲಿನ ಶ್ರೀ ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಂಗೀತ ಸುಧೆ ಹರಿಸಲಿದ್ದಾರೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬಾನ್ಸುರಿ ವಾದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಇವರಿಗೆ ಪಂ. ಕಿರಣ್ ಗೋಡ್ಖಿಂಡಿ ಸಹಕಾರ ನೀಡಲಿದ್ದಾರೆ.
ಪಂ. ಪ್ರವೀಣ್ ಗೋಡ್ಖಿಂಡಿ ರಾಷ್ಟ್ರದ ಶ್ರೇಷ್ಠ ಕಲಾವಿದರಲ್ಲೊಬ್ಬರು. ಕೊಳಲಿನತ್ತ ಆಕರ್ಷಿತರಾದ ಇವರಿಗೆ ತಂದೆ ವಿದ್ವಾನ್ ವೆಂಕಟೇಶ ಗೋಡ್ಖಿಂಡಿಯವರೇ ಮೊದಲ ಗುರುಗಳು. ಅನಂತರ ಬಾನ್ಸುರಿಯತ್ತ ಹೊರಳಿದ ಇವರ ಆಸಕ್ತಿ, ಸಾಧನೆಗಳು ಇವರನ್ನೊಬ್ಬ ಸಂಗೀತ ಮಾಂತ್ರಿಕರನ್ನಾಗಿಸಿತು. ಹೆಸರಾಂತ ಮೃದಂಗ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮರ ಮಾರ್ಗದರ್ಶನ ಪಡೆದು ಲಯ ಮತ್ತು ಲಯಕಾರಿಯಲ್ಲಿ ಅಪೂರ್ವ ಜ್ಞಾನವನ್ನು ಪಡೆದುಕೊಂಡರು. ತಂದೆಯವರಿಂದ ಕಿರಾಣಾ ಘರಾಣೆಯ ಶೈಲಿಯಲ್ಲಿ ಕಲಿತರೂ ಸ್ವಂತ ಪರಿಶ್ರಮದಿಂದ ತಂತ್ರಕಾರಿ ಶೈಲಿಯನ್ನು ಕರಗತ ಮಾಡಿಕೊಂಡರು. ಪಾಶ್ಚಾತ್ಯ ಮತ್ತು ಕರ್ನಾಟಕ ಸಂಗೀತದ ಸೂಕ್ಷ್ಮ ವೈಶಿಷ್ಟ್ಯಗಳನ್ನೂ ಅಳವಡಿಸಿಕೊಂಡಿರುವ ಮುಕ್ತ ಮನಸ್ಸಿನ ಕಲಾವಿದರು. ಪ್ರಪಂಚದಾದ್ಯಂತ ತಮ್ಮ ವಾದನದ ಮೋಡಿಯನ್ನು ಕೋಟ್ಯಂತರ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿಸಿರುವರು.
ಹಲವಾರು ಚಲನಚಿತ್ರಗಳಿಗೆ ಮತ್ತು ಟಿ.ವಿ. ಧಾರಾವಾಹಿಗಳಿಗೆ ಸಂಗೀತ ನಿರ್ದೇಶನ ನೀಡಿರು ಇವರು, ಫ್ಯೂಷನ್ ಸಂಗೀತ ಇವರ ಮತ್ತೊಂದು ಆಸಕ್ತಿಯ ಕ್ಷೇತ್ರ. ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾಗಿದ್ದರೂ, ಅತ್ಯಂತ ಸರಳ, ಸ್ನೇಹಮಯ, ಸೌಮ್ಯ ವ್ಯಕ್ತಿತ್ವವುಳ್ಳ ಸಜ್ಜನರು, ಸಂಭಾವಿತರು.