

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿಯಾಗಿದ್ದ ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣದ ಮತ್ತೊಬ್ಬ ಆರೋಪಿನ್ನು ಸಿಐಡಿ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಕೆ.ಆರ್.ಪುರ ಸಂಚಾರ ಠಾಣೆ ಸಬ್ಇನ್ಸ್ಪೆಕ್ಟರ್ ಸುಬ್ರಹ್ಮಣ್ಯ ಬಂಧಿತ ಆರೋಪಿ.
ಅಭ್ಯರ್ಥಿಗಳು ಮತ್ತು ನೇಮಕಾತಿ ವಿಭಾಗದ ಅಧಿಕಾರಿಗಳ ನಡುವೆ ಪಿಎಸ್ಐ ಸುಬ್ರಹ್ಮಣ್ಯ ಏಜೆಂಟ್ ಆಗಿ ಕೆಲಸ ಮಾಡಿದ್ದ ಎಂಬ ಆರೋಪ ಕೇಳಿ ಬಂದಿದೆ. ಹಗರಣ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದ ಸುಬ್ರಹ್ಮಣ್ಯಯನ್ನು ಸಿಐಡಿ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ್ದಾರೆ.
ಕೋಲಾರ ಮೂಲದ ಸುಬ್ರಹ್ಮಣ್ಯ, 2016ನೇ ಸಾಲಿನಲ್ಲಿ ಪೊಲೀಸ್ ಇಲಾಖೆಗೆ ಸಬ್ಇನ್ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದರು. ಬೆಂಗಳೂರು ನಗರಕ್ಕೆ ನಿಯೋಜನೆಗೊಂಡ ಸುಬ್ರಹ್ಮಣ್ಯ, ಕೆ.ಆರ್.ಪುರ ಕಾನೂನು ಸುವ್ಯವಸ್ಥೆ ಠಾಣೆಯಲ್ಲಿ 3 ವರ್ಷ ಸೇವೆ ಸಲ್ಲಿಸಿ ಬಳಿಕ ಸಂಚಾರ ಠಾಣೆಗೆ ವರ್ಗವಾಗಿದ್ದರು. ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಮತ್ತು ಪ್ರಥಮ ದರ್ಜೆ ಸಹಾಯಕ ಹರ್ಷ ಜತೆ ಸ್ನೇಹವಿತ್ತು. ಪಿಎಸ್ಐ ಪರೀಕ್ಷೆ ಬರೆದಿದ್ದ ಇಬ್ಬರು ಅಭ್ಯರ್ಥಿಗಳಿಗೆ ಮಧ್ಯವರ್ತಿಯಾಗಿ ಸುಬ್ರಹ್ಮಣ್ಯ ಡೀಲ್ ಕುದುರಿಸಿದ್ದರು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.