

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಒಎಂಆರ್ ಶೀಟ್ ತಿದ್ದುಪಡಿ ಮಾಡಿಸಿ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದು, ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ರಚನಾ ಹನುಮಂತ (25) ಎಂಬುವರನ್ನು ಸಿಐಡಿ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
ಪಿಎಸ್ಐ ನೇಮಕ ಅಕ್ರಮ ವಿಚಾರವಾಗಿ ಬೆಂಗಳೂರಿನಲ್ಲಿ ಅಭ್ಯರ್ಥಿಗಳು ಕೈಗೊಂಡಿದ್ದ ಹೋರಾಟದಲ್ಲಿ ರಚನಾ, ಇತರರು ಮುಂಚೂಣಿಯಲ್ಲಿದ್ದರು. ಇವರ ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿತ್ತು. ಹಗರಣದಲ್ಲಿ ಅವರ ಪಾತ್ರವೂ ಇದೆ ಎಂಬುದು ಬೆಳಕಿಗೆ ಬಂದು ಕೇಸ್ ಆಗುತ್ತಲೇ ಮೂರೂವರೆ ತಿಂಗಳಿಂದ ತಲೆಮರೆಸಿಕೊಂಡಿದ್ದರು.
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಆಳಂದ ತಾಲೂಕಿನ ಹಿರೊಳ್ಳಿ ಕ್ರಾಸ್ ಬಳಿ ಇದ್ದಾರೆ ಎಂಬ ಮಾಹಿತಿ ಸಿಗುತ್ತಲೇ ಸಿಐಡಿ ತಂಡ ಕಾರ್ಯಾಚರಣೆ ನಡೆಸಿ ಶುಕ್ರವಾರ ರಾತ್ರಿ ವಶಕ್ಕೆ ತೆಗೆದುಕೊಂಡಿತ್ತು. ಶನಿವಾರ ಆಕೆಯನ್ನು ಬಂಧಿಸಿ, ರೋಗ್ಯ ತಪಾಸಣೆ ಮಾಡಿಸಿದ ಬಳಿಕ ನಗರದ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ದಸ್ತಗೀರ್ಸಾಬ್ ಮುಲ್ಲಾ ಎದುರು ಹಾಜರುಪಡಿಸಲಾಯಿತು. ಬೆಂಗಳೂರಿನಲ್ಲಿ ಕೇಸ್ ದಾಖಲಾಗಿದ್ದರಿಂದ ಟ್ರಾನ್ಸಿಟ್ ವಾರಂಟ್ ಪಡೆದುಕೊಂಡಿದ್ದು, ಆಕೆಯನ್ನು ಸಿಐಡಿ ತಂಡ ಬೆಂಗಳೂರಿಗೆ ಕರೆದೊಯ್ಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.