

ಮೈಸೂರು: ಪಿಎಸ್‌ಐ ಪರಶುರಾಮ್ ಶಂಕಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸ್ಥಾನದಿಂದ ಚೆನ್ನಾರೆಡ್ಡಿ ಹಾಗೂ ಅವರ ಪುತ್ರನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಆಗ್ರಹಿಸಿದರು.
ಪಿಎಸ್‌ಐ ವರ್ಗಾವಣೆಯಲ್ಲಿ ಚೆನ್ನಾರೆಡ್ಡಿ ಹಾಗೂ ಅವರ ಪುತ್ರನ ಪಾತ್ರ ಇರುವ ಆರೋಪಗಳು ಕೇಳಿ ಬರುತ್ತಿವೆ. ಚೆನ್ನಾರೆಡ್ಡಿ ಹಾಗೂ ಅವರ ಪುತ್ರನ ಒತ್ತಡದಿಂದ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಚೆನ್ನಾರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೊಂದಿಗೆ ಆ ನಂತರ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅವರೊಂದಿಗೆ ನಾನು ಕೆಲಸ ಮಾಡಿದ್ದೇನೆ. ಆ ಸಂದರ್ಭದಲ್ಲಿ ಇಂತಹ ಒಂದು ವ್ಯವಸ್ಥೆಯನ್ನು ನಾನು ಕಂಡಿರಲಿಲ್ಲ. ನಾವು ಎಲ್ಲಿಗೋಗ್ತಾ ಇದ್ದೀವೆ? ಶಾಸಕ ಮತ್ತು ಅವರ ಪುತ್ರನ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪಿಎಸ್‌ಐ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂದರೆ ನಿಮ್ಮ ಆಡಳಿತ ಯಾವ ರೀತಿ ನಡೀತಾ ಇದೆ? ನನ್ನ 35 ವರ್ಷಗಳ ರಾಜಕೀಯ ಜೀವನದ ಅನುಭವದಲ್ಲಿ ಪೋಲಿಸರನ್ನು ಎಂದೂ ಇಷ್ಟೊಂದು ಕೀಳುಮಟ್ಟದಿಂದ ನಡೆಸಿಕೊಂಡಿದ್ದನ್ನು ನಾನು ಕಂಡಿಲ್ಲ. ಗೃಹ ಸಚಿವರು ಒಬ್ಬರು ಪ್ರಾಮಾಣಿಕರಾಗಿದ್ದರೆ ಸಾಲದ, ಅವರ ಸುತ್ತಮುತ್ತ ಇರುವವರೂ ಸಹ ಪ್ರಾಮಾಣಿಕರಾಗಿ ಇರಬೇಕು ಎಂದರು.
‘ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ಯಾಂಟ್ ಒಳಗೆ ಖಾಕಿ ಚಡ್ಡಿ ಹಾಕವ್ರೆ’ ಎಂಬ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ತಿರುಗೇಟು ನೀಡಿದ ಸಾ.ರಾ. ಮಹೇಶ್, 2006ರಲ್ಲಿ ಜಮೀರ್ ಅಣ್ಣಾ ಬಸ್ ಓಡಿಸಿಕೊಂಡು ಬಂದವರು. ನಿಮ್ಮನ್ನು ಶಾಸಕ, ಸಚಿವರನ್ನಾಗಿ ಮಾಡಿದ್ದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ. ಆವಾಗ ಯಾವ ಚಡ್ಡಿ ಹಾಕಿದ್ದರು ಅಂತ ಗೊತ್ತಿರಲಿಲ್ವಾ? ನಾನು ಈ ಹಿಂದೆ ಬಿಜೆಪಿಯಲ್ಲಿದ್ದೆ, ಈಗ ಜೆಡಿಎಸ್‌ನಲ್ಲಿ ಇದ್ದೇನೆ. ಹಾಗಂತ ಬಿಜೆಪಿ ಅವರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುವುದು ಸರಿಯಾ? ನೀವು ಈಗಾಗಲೇ ಮಂತ್ರಿ ಆಗಿದ್ದೀರಿ ಇನ್ನೇನು ಬೇಕು? ಇನ್ಯಾಕೆ ಈ ರೀತಿ ಹೇಳಿಕೆ ಕೊಟ್ಟು ಯಾರನ್ನೂ ಒಲೈಸಬೇಕು ಎಂದು ವಾಗ್ದಾಳಿ ನಡೆಸಿದರು.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ ಆಗಲಿ, ಯಾರು ಬೇಡ ಅಂದವರು. ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಏನು ತೀರ್ಮಾನ ಆಗಿದೆ ಗೊತ್ತಿಲ್ಲ. ‘ಏನೋ ನಮ್ಮವರು ಒಬ್ಬರು ಮುಖ್ಯಮಂತ್ರಿ ಆಗಲಿ ಎಂದು ಜನ ನಿಮಗೆ 136 ಸೀಟು ಕೊಟ್ಟರು ಮುಂದೆ ನೀವು ಸಿಎಂ ಆದರೆ ಸಂತೋಷ. ಸಿಎಂ ಆಗಬೇಡಿ ಅನ್ನೋಕೆ ನಾವ್ಯಾರು’. ಅದನ್ನು ಬಿಟ್ಟು ದೇವೇಗೌಡರ ಕುಟುಂಬದ ಮೇಲೆ ಯಾಕೆ ಡಿ.ಕೆ. ಶಿವಕುಮಾರ್ ದ್ವೇಷ ಕಾರುತ್ತಿದ್ದೀರಾ? ಡಿ.ಕೆ. ಶಿವಕುಮಾರ್ ಹಾಗೂ ಎಚ್.ಡಿ. ಕುಮಾರಸ್ವಾಮಿ ಪರಸ್ಪರ ಕಿತ್ತಾಡುವುದನ್ನು ಬಿಡಬೇಕು. ನಾನು ನಮ್ಮ ನಾಯಕರಾದ ಎಚ್.ಡಿ ಕುಮಾರಸ್ವಾಮಿ ಅವರಿಗೂ ಮನವಿ ಮಾಡಿದ್ದೇನೆ. ವೈಯಕ್ತಿಕ ವಿಚಾರ ಚರ್ಚೆ ಬೇಡ ನಾವು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕಿದೆ ಅಷ್ಟೆ. ಅದನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡೋಣ ಎಂದು ಮನವಿ ಮಾಡಿದ್ದೇನೆ ಎಂದರು.
ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಕಾಂಗ್ರೆಸ್ ವಿರೋಧ ಮಾಡುತ್ತಿರುವುದು ಸರಿಯಲ್ಲ. ನೀವು ಬಳ್ಳಾರಿ ಪಾದಯಾತ್ರೆ ಮಾಡಿದಾಗ ನಾವು ಚಕಾರ ಎತ್ತಿದ್ವಾ? ಆಡಳಿತ ಪಕ್ಷದಲ್ಲಿರುವ ನೀವು ಮೊದಲು ಆಡಳಿತ ಮಾಡಿ, ಪ್ರತಿಪಕ್ಷದವರ ರೀತಿ ವರ್ತಿಸಬೇಡಿ. ಬಿಜೆಪಿ ಹಾಗೂ ಜೆಡಿಎಸ್‌ನ ತಪ್ಪುಗಳನ್ನು ಸರ್ಕಾರ ಎತ್ತಿ ತೋರಿಸುವ ಕೆಲಸ ಮಾಡುತ್ತಿದೆ. ಈ ರೀತಿ ಬ್ಲಾೃಕ್‌ಮೇಲ್ ಮಾಡುವ ಬದಲು ಆರೋಪಗಳ ಕುರಿತು ಸರ್ಕಾರ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
ಎಸ್‌ಐಟಿ ಹೆಸರನ್ನು ‘ಎಸ್‌ಎಸ್‌ಐಟಿ’ ಎಂದು ಬದಲಾಯಿಸುವುದು ಉತ್ತಮ. ಎಸ್‌ಐಟಿ ಇದೀಗ ‘ಸಿದ್ದರಾಮಯ್ಯ, ಶಿವಕುಮಾರ್ ವಿಶೇಷ ತನಿಖಾ ತಂಡ’ವಾಗಿ ಮಾರ್ಪಾಡು ಹೊಂದಿದೆ ಎಂದು ಟೀಕಿಸಿದರು.