ಪರಶುರಾಮ ಪತ್ನಿಗೆ ಉದ್ಯೋಗ, 50 ಲಕ್ಷ ರೂ. ಪರಿಹಾರ ನೀಡಲು ಚಿಂತನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಭರವಸೆ

IMG-20240807-WA0029
Published on


ಕೊಪ್ಪಳ: ಯಾದಗಿರಿ ಪಿಎಸೈ ಪರಶುರಾಮ ಸಾವಿಗೆ ವಿಷಾದ ವ್ಯಕ್ತಪಡಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ, ಪರಶುರಾಮ ಪತ್ನಿಗೆ ಸರ್ಕಾರಿ ಉದ್ಯೋಗ ಹಾಗೂ ಕುಟುಂಬಕ್ಕೆ 50ಲಕ್ಷ‌ ರೂ. ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ಪರಶುರಾಮ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿ ಮಾತನಾಡಿದರು.

ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಆತನ ಪತ್ನಿಗೆ ವಿದ್ಯಾರ್ಹತೆ ಅನುಸಾರ ಸೂಕ್ತ ಉದ್ಯೋಗ ಕೊಡಿಸಲಾಗುವುದು. ಅವರು ಕೃಷಿ ವಿವಿ ರಾಯಚೂರು ಅಥವಾ ಜೆಸ್ಕಾಂ ಇಲಾಖೆಯಲ್ಲಿ ನೌಕರಿ ಕೊಡುವಂತೆ ಕೇಳಿದ್ದಾರೆ. ಸಿಎಂ ಜತೆ ಮಾತನಾಡಿ ಮಾಡಿಸಿಕೊಡುವೆ. ಇಲ್ಲವೇ ನಮ್ಮ ಇಲಾಖೆಯಲ್ಲಿ ವಿದ್ಯಾರ್ಹತೆ ಅನುಸಾರ ಹುದ್ದೆ ನೀಡಲಾಗುವುದು‌. ಬೇರೆ ಇಲಾಖೆಯಲ್ಲಿ ಬೇಕೆಂದರೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು.
ಅವರ ಕುಟುಂಬಕ್ಕೆ ಸರ್ಕಾರದಿಂದ 50ಲಕ್ಷ‌ರೂ. ಪರಿಹಾರ ನೀಡಬೇಕೆಂದುಕೊಂಡಿದ್ದೇವೆ. ಈ ಬಗ್ಗೆ ಸಿಎಂ ಬಳಿ ಚರ್ಚಿಸಿ ಘೋಷಣೆ ಮಾಡುತ್ತೇವೆ ಎಂದರು.

ಶಾಸಕರು ಹಾಗೂ ಅವರ ಪುತ್ರ ಹಣ ಕೇಳಿದ್ದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಸಿಐಡಿಗೆ ಪ್ರಕರಣ ನೀಡಿದ್ದೇವೆ. ಸ್ಥಳೀಯ ಅಧಿಕಾರಿಗಳಿಂದ ನ್ಯಾಯ ಸಿಗುವುದಿಲ್ಲ ಎಂದು ಅವರ ಕುಟುಂಬದವರು ಅನುಮಾನಿಸಿದ ಕಾರಣ ನೀಡಿದ್ದರು. ಅದಕ್ಕೆ ನೀಡಿದ್ದೇವೆ. ವರದಿ ಆಧರಿಸಿ ಕ್ರಮ ಮಾಡಲಾಗುವುದು. ವಿಪಕ್ಷದವರು ಹೇಳಿದ್ದನ್ನು ಕೇಳುವುದಿಲ್ಲ. ಸಿಬಿಐಗೆ ಕೊಡುವ ಅರ್ಹತೆ ಕೇಸ್ ನಲ್ಲಿ ಇಲ್ಲ. ಅದಕ್ಕೆ ಕಾರಣ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾವು ವಿಪಕ್ಷದಲ್ಲಿದ್ದಾಗ ಎಲ್ಲ ಪ್ರಕರಣಗಳನ್ನು ಸಿಬಿಐಗೆ ಕೊಡಿ ಅಂತಿದ್ವಿ. ಅವರು ಆಗ ಸಿಬಿಐ ಅಂದರೆ ಚೋರ್ ಬಚಾವೋ ಸಂಸ್ಥೆ ಅಂದಿದ್ದಾರೆ. ಆಗ ಅವರು ಸದನದಲ್ಲಿ ಮಾಡಿದ ಆರೋಪಗಳು ದಾಖಲಾಗಿವೆ. ಈಗ ಅವರೇ‌ ಎಲ್ಲ ಕೇಸ್ ಸಿಬಿಐಗೆ ನೀಡಿ ಅನ್ನುತ್ತಿದ್ದಾರೆ. ಈಗ ಸಿಬಿಐ, ಸಿಐಡಿ ಸರಿಯಾಗಿ ತನಿಖೆ ಮಾಡುತ್ತಾವಾ ? ಛಲವಾದಿ ನಾರಾಯಣಸ್ವಾಮಿ ಈಗ ತಾನೆ ಮೇಲ್ಮನೆಯಲ್ಲಿ ವಿಪಕ್ಷ ನಾಯಕನಾಗಿದ್ದಾರೆ. ಇನ್ನು ಸ್ವಲ್ಪ ಕಾನೂನು ತಿಳಿದುಕೊಳ್ಳಲಿ ಎಂದು ಅವರ ಟೀಕೆಗೆ ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net