

ಭಟ್ಕಳ: ಮುರ್ಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ವಿಫಲರಾಗಿರುವ ಪಿಎಸ್‌ಐ ಮಂಜುನಾಥ ಅವರನ್ನು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮುರ್ಡೇಶ್ವರದ ಶೆಟ್ಟರಕೇರಿಯ ಈಶ್ವರ ಶನಿಯಾರ ನಾಯ್ಕ ಸಹಯೋಗದಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಹಿಳೆಯನ್ನು ಇಟ್ಟುಕೊಂಡು ವಸತಿಗೃಹವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಡಿವೈಎಸ್ಪಿ ಅಶ್ವಿನಿ ಬಿ. ನೇತೃತ್ವದಲ್ಲಿ ದಾಳಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಅಮಾನತುಗೊಳಿಸಲಾಗಿದೆ. ಹಾಗೆಯೇ ಅಧೀನ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡದೇ ಮತ್ತು ಮೇಲ್ವಿಚಾರಣೆ ನಡೆಸದೇ ಇರುವ ಭಟ್ಕಳ ಗ್ರಾಮೀಣ ವೃತ್ತದ ಪ್ರಭಾರ ಹೊಂದಿದ್ದ ಗ್ರಾಮೀಣ ಠಾಣೆ ಪೊಲೀಸ್ ನಿರೀಕ್ಷಕರ ವಿರುದ್ಧವೂ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಎಸ್ಪಿ ಎಂ. ನಾರಾಯಣ ತಿಳಿಸಿದ್ದಾರೆ.